ಬಂದೇನವಾಜ್ ನಾಗಡದಿನ್ನಿ
ದೇವದುರ್ಗ: ಮಾ-೪:
ಅಕ್ಷರ ಕಲಿಯಲು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳನ್ನು ನೋಡಿದ ಮಲ್ಕಂದಿನ್ನಿ ಗ್ರಾಮದ ಕೂಲಿಕಾರ್ಮಿಕ ಆಂಜಿನೇಯ, ತಾನು ಕೂಲಿಮಾಡಿ ದುಡಿದ ಹಣದಲ್ಲಿ ಮಕ್ಕಳಿಗೆ ಸೈಕಲ್ ವಿತರಿಸುವ ಮೂಲಕ ಸರ್ಕಾರಕ್ಕೆ ಮಾದರಿಯಾಗಿದ್ದಾನೆ.
ಬಡತನದಲ್ಲಿ ಸರ್ಕಾರಿ ಶಾಲೆಗೆ ನಿತ್ಯ ನಾಲ್ಕೈದು ಕಿ.ಮೀ ನಡೆದುಕೊಂಡು ಹೋಗಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಕಷ್ಟವನ್ನು ಅರಿತು ಉಚಿತ ಬೈಸಿಕಲ್ ವಿತರಿಸಿ ಮಾದರಿಯಾಗಿದ್ದಾನೆ. ತಾಲೂಕಿನ ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಯ ಮಲ್ಕಂದಿನ್ನಿ ಗ್ರಾಮದ ೨೪ವರ್ಷದ ಯುವಕ ಆಂಜನೇಯ ಯಾದವ್ ತನ್ನ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿದ್ದಾನೆ.
ಸ್ಪರ್ಧಾತ್ಮಕ ಯುಗದಲ್ಲಿ ವೈಯಕ್ತಿಕ ಲಾಭದ ನಿರೀಕ್ಷೆಯಲ್ಲಿರುವ ನಾಗರೀಕ ಸಮುದಾಯಕ್ಕೆ ಅನುಕರಣಿಯವಾಗಿದ್ದಾನೆ. ಮಲ್ಕಂದಿನ್ನಿ ಗ್ರಾಮದಿಂದ ಹೇಮನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ನಿತ್ಯ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಪರಿಸ್ಥಿತಿಯನ್ನು ಮನಗಂಡಿದ್ದಾನೆ.
ಆಂಜನೇಯ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಬಿಡುವಿದ್ದಾಗ ಕೂಲಿ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಾನೆ. ತನ್ನ ದುಡಿಮೆಯಿಂದ ಕೂಡಿಟ್ಟ ೬೦ ಸಾವಿರ ರೂಪಾಯಿಗಳಿಂದ ೧೧ ಬೈಸಿಕಲ್ ಖರೀದಿಸಿ ಕೊಟ್ಟಿದ್ದಾನೆ. ಈ ಮೂಲಕ ಜನಪ್ರತಿನಿಧಿಗಳು, ಸರ್ಕಾರ ಮಾಡದ ಕೆಲಸವನ್ನು ಬಡ ಯುವಕ ಮಾಡಿದ್ದಾನೆ. ಯುವಕ ಈ ಕಾರ್ಯ ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮಲ್ಕಂದಿನ್ನಿ ಗ್ರಾಮದ ರೇಖಾ ಮಾರೆಪ್ಪ, ರಾಧಿಕಾ ಲಕ್ಷ್ಮಣ, ಮಹೇಶ್ವರಿ ಚಂದ್ರಾಮ, ದೀಪಾ ರೆಡ್ಡೆಪ್ಪ, ಆಂಜಿನಯ್ಯ ಬಾಲದಂಡ, ಲಕ್ಷ್ಮೀ ಬಾಲಯ್ಯ, ಭಾಗ್ಯ ಶ್ರೀ ಹನ್ಮಂತ್ರಾಯ ಇತರ ವಿದ್ಯಾರ್ಥಿಗಳು ಬೈಸಿಕಲ್ ಪಡೆದಿದ್ದಾರೆ.
ಸಾರಿಗೆ ಸೌಕರ್ಯವಿಲ್ಲದ ಹಳ್ಳಿಗಳಿಂದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತೆರಳುವುದು ತುಂಬಾ ಕಷ್ಟದಾಯಕ. ನಿತ್ಯ ನಡೆದುಕೊಂಡು ಶಾಲೆಗೆ ಹೋಗುವ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯ. ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳು ಸಾರಿಗೆ ವ್ಯವಸ್ಥೆಯಿಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನನಗೊಂಡು ನಮ್ಮೂರಿನ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್ ವಿತರಿಸಿದ್ದೇನೆ.
-ಆಂಜಿನಯ್ಯ ಯಾದವ್, ಮಲ್ಕಂದಿನ್ನಿ
ಉಚಿತ ಬೈಸಿಕಲ್ ವಿತರಿಸಿದ ಯುವಕ.
ಮಲ್ಕಂದಿನ್ನಿ ಗ್ರಾಮದಿಂದ ಹೇಮನೂರು ಸರ್ಕಾರಿ ಪ್ರೌಢ ಶಾಲೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲ. ಪ್ರತಿ ದಿನ ನಡೆದುಕೊಂಡೇ ಹೋಗಬೇಕು. ಇದನ್ನು ಮನಗೊಂಡು ನಮ್ಮೂರಿನ ಸಹೋದರ ಆಂಜನೇಯ ತನ್ನ ದುಡಿಮೆಯಲ್ಲಿ ಬೈಸಿಕಲ್ ನೀಡಿದ್ದಕ್ಕಾಗಿ ಅಭಿನಂದನೆಗಳು. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರ ಬೈಸಿಕಲ್ ವಿತರಿಸುತ್ತಿದ್ದ ಯೋಜನೆಯನ್ನು ಮರು ಆರಂಭ ಮಾಡಲಿ.
-ಬೈಸಿಕಲ್ ಪಡೆದ ವಿದ್ಯಾರ್ಥಿಗಳು