ರಾಯಚೂರು,ಸೆ.17: ವೈಧ್ಯಕೀಯ ಕಾಲೇಜುಗಳಲ್ಲಿ ಹೊಸ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ವಿದ್ಯಾರ್ಥಿನಿಯ ರಕ್ಷಣೆಗೆ ವಿಶೇಷ ವ್ಯವಸ್ಥೆ ಜಾರಿ ತರಲಾಗುವುದೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದಲ್ಲಿ ಧ್ವಜಾರೋಹಣದ ನಂತರ ಸುದ್ದಿಗಾರೊಂದಿಗೆ ಮಾತನಾಡಿ, ನಿಗಾ ವ್ಯವಸ್ಥೆ ಬಲಗೊಳಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ. ಸರ್ಕಾರಿ ವೈಧ್ಯಕೀಯ ಕಾಲೇಜುಗಳಲ್ಲಿ ಕೇವಲ ಸಿಸಿಟಿವಿ ಅಳವಡಿಸಿದರೆ ಸಾಲದು, ಮತ್ತಷ್ಟು ಕ್ರಮಗಳ ಅವಶ್ಯಕತೆ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹೊಸ ತಂತ್ರಜ್ಞಾನದ ಬಳಕೆ ಮೂಲಕ ವಿದ್ಯಾರ್ಥಿನಿಯರ ರಕ್ಷಣೆಗೆ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತದೆ. ನಿತ್ಯವೂ ಮೇಲುಸ್ತುವಾರಿ ನಡೆಸುವ ಅವಶ್ಯಕತೆಯ ಹಿನ್ನಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಪರಾಮರ್ಶೆ ನಡೆಸಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕದ ಪ್ರದೇಶದ ವಿಶೇಷ ಕೋಶ ಮುಚ್ಚಲು ನಿರ್ಧರಿಸಿರುವ ಕುರಿತು ಮಾಹಿತಿಯಿಲ್ಲ ಎಂದ ಅವರು ಸಚಿವ ಸಂಪುಟದಲ್ಲಿ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿರ್ಧಾರವಾಗಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ಸರಕಾರಕ್ಕೆ ವಿಶೇಷ ಕಾಳಜಿಯಿರುವದರಿಂದಲೇ ಸಚಿವ ಸಂಪುಟ ಸಭೆ ಕಲ್ಬುರ್ಗಿಯಲ್ಲಿ ನಡೆಸಿ ಅನುಮೋದನೆ ನೀಡಲಾವುದೆಂದರು. ಕಳೆದ 10 ವರ್ಷಗಳಲ್ಲಿ ಆದ ಸಾಧನೆ, ಮುಂದಿನ ಪ್ರಗತಿಯ ಕುರಿತು ಸರ್ಕಾರ ಬದ್ಧತೆಯಿಂದ ಕಾರ್ಯನರ್ವಿಹಸಿಲು ಸಚಿವಾಲಯ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗಲು ಬಿಜೆಪಿಯೇ ಕಾರಣವಾಗಿದೆ. ಮೀಸಲಾತಿ ನಿಗಧಿ, ಕೆನೆಪದರ ಮೀಸಲಾತಿ ಕುರಿತಂತೆ ಸ್ಪಷ್ಟತೆಯಿಲ್ಲದೇ ಹೋಗಲು ಬಿಜೆಪಿ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ ವೆಂದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜ, ಶಾಸಕ ದದ್ದಲ್ ಬಸನಗೌಡ, ವಿಧಾನ ಪರಿಷತ ಸದಸ್ಯ ಎ.ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಂ.ಪುಟ್ಟಮಾದಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಪಾಟೀಲ್ ಇಟಗಿ,ಕಾಂಗ್ರೆಸ್ ಮುಖಂಡ ಮಹ್ಮದ್ ಶಾಲಂ ಉಪಸ್ಥಿತರಿದ್ದರು.