ರಾಯಚೂರು,ಫೆ.೨೯:
ಕೃಷಿ ವಲಯವು ದೇಶದ ಆಧಾರ ಸ್ಥಂಬವಾಗಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶ, ಸಮಾಜ ಹಾಗೂ ಕೃಷಿ ಕ್ಷೇತ್ರದ ಹಿತಕ್ಕಾಗಿ ತಮ್ಮ ಜ್ಞಾನವನ್ನು ಸಮರ್ಪಿಸಬೇಕು ಎಂದು ರಾಜ್ಯಪಾಲರೂ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ ಚಂದ್ ಗೆಹ್ಲೋಟ್ ಅವರು ಹೇಳಿದರು.
ಅವರು ಫೆ.೨೯ರ(ಗುರುವಾರ) ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ೧೩ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು.
ವಿಶ್ವವಿದ್ಯಾಲಯವು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಬಳಕೆ ಕುರಿತು ಹೆಚ್ಚಿನ ಸಂಶೋಧನೆಗಳನ್ನು ಮಾಡಲಾಗುತ್ತಿದ್ದು, ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದಾಗಿದೆ. ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ವಿವಿಧ ಪ್ರಕಾರದ ಬೇಸಾಯ ಕ್ರಮಗಳನ್ನು ಪರಿಚಯಿಸುವಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ.
ರೈತರಿಗೆ ಬೇಸಾಯದಲ್ಲಿ ಕಂಡುಬರುವ ರೋಗಗಳ ಕುರಿತು ಹಾಗೂ ಬೆಳೆಗಳ ವಿವಿಧ ಪರೀಕ್ಷೆಗಳನ್ನು ಕೈಗೊಂಡು ರೋಗಗಳನ್ನು ನಿರ್ಮೂಲನೆ ಮಾಡುವ ಕೀಟನಾಶಕಗಳ ಬಗ್ಗೆ ಉತ್ತಮ ಮಾಹಿತಿಗಳನ್ನು ನೀಡುವಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಇಂದು ವಿಶ್ವವಿದ್ಯಾಲಯದಿಂದ ಪದವಿಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಮುಂದಿನ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಮುಂದಾಗಬೇಕು ಮತ್ತು ಕೃಷಿ ಕ್ಷೇತ್ರಕ್ಕಾಗಿ ತಮ್ಮ ಜ್ಞಾನವನ್ನು ಸಮರ್ಪಿಸಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಕೃಷಿ ಕ್ಷೇತ್ರಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಮಹತ್ವದ ಪ್ರತೀಕವಾಗಿದೆ. ದೇಶದ ಅರ್ಥವ್ಯವಸ್ಥೆ, ದೇಶದ ಅಭಿವೃದ್ಧಿ ಮತ್ತು ಭಾರತವನ್ನು ವಿಕಸಿತ ರಾಷ್ಟçವನ್ನಾಗಿ ಮಾಡುವಲ್ಲಿ ಮಹಿಳೆಯರ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕತೆ ವಿಭಾಗದ ಉಪಮಹಾನಿರ್ದೇಶಕ ಡಾ.ಎಸ್.ಎನ್ ಝಾ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮAತಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹರೀಶ ರಾಮಸ್ವಾಮಿ ಸೇರಿದಂತೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.