ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿ0ದ ಸಜ್ಜೆ ಬೆಳೆಯ ಕ್ಷೇತ್ರೋತ್ಸವ

Eshanya Times

ಕೊಪ್ಪಳ, ಸೆಪ್ಟಂಬರ್ 19: ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಜೈವಿಕ ಬಲವರ್ಧನೆಗೊಳಿಸಿದ ಸಜ್ಜೆ ಬೆಳೆಯ ಸಂಕರಣ ತಳಿ ವಿ.ಪಿ.ಎಮ್.ಹೆಚ್.-14 ಬೆಳೆಯ ಕ್ಷೇತ್ರೋತ್ಸವ ನಡೆಯಿತು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾನಾಡಿ,
ವಿ.ಪಿ.ಎಮ್.ಹೆಚ್.-14 ಸಜ್ಜೆ ಬೆಳೆಯ ಸಂಕರಣ ತಳಿಯನ್ನು ಕೃಷಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿ ಡಾ. ಅಥೋನಿ ಬಂಡೇನವಾಜ್ ಅವರು ಅಭಿವೃದ್ಧಿಪಡಿಸಿದ್ದಾರೆ. ಮುಂಚೂಣಿ ಪ್ರಾತ್ರಕ್ಷಿಕೆಯಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ಯಲಬುರ್ಗಾ ತಾಲ್ಲೂಕಿನ ಎರಡು ಗುಚ್ಛ ಗ್ರಾಮಗಳಾದ ವಣಗೇರಿ ಮತ್ತು ಮಂಗಳೂರುಗಳಿ0ದ 10 ಜನ ರೈತ ಫಲಾನುಭವಿಗಳನ್ನು ಆಯ್ಕೆಮಾಡಿ ಉಚಿತವಾಗಿ ನೀಡಲಾಗಿದೆ. ರೈತರು ಜೂನ್ ತಿಂಗಳ ಕೊನೆವಾರದಲ್ಲಿ ಬಿತ್ತನೆ ಮಾಡಿದ್ದು ಈಗ ಕಟಾವಿಗೆ ಸಿದ್ದವಾದ ಸಂದರ್ಭದಲ್ಲಿ ಈ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೊಂದು ಉತ್ತಮ ಸಂಕರಣ ತಳಿಯಾಗಿದ್ದು, ಮೊದಲಬಾರಿಗೆ ಜಿಲ್ಲೆಯಲ್ಲಿ ಪರಿಚಯಿಸಲಾಗುತ್ತಿದೆ. ಕೇವಲ 90 ದಿನಗಳ ಅವಧಿಯಲ್ಲಿ ಕಟಾವಿಗೆ ಬರುವ ಈ ತಳಿ ಸತು ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿದ್ದು, ಉತ್ತಮ ತೂಕವುಳ್ಳದ್ದಾಗಿದೆ. ಮಧುಮೇಹಿ ಮತ್ತು ಸಂದೀವಾತ ರೋಗಗಳಿಗೆ ಇದೊಂದು ಉತ್ತಮ ಔಷಧಿಯಾಗಿದ್ದು, ದಿನನಿತ್ಯ ಆಹಾರದಲ್ಲಿ ರೊಟ್ಟಿ ಅಲ್ಲದೆ ಸಜ್ಜೆ ಬಾತ್, ಸಜ್ಜೆ ಪಾಯಸ ಹೀಗೆ ಅನೇಕ ತರಹದ ಖಾದ್ಯಗಳನ್ನು ಮಾಡಿ ಸೇವಿಸಬಹುದಾಗಿದೆ ಎಂದರು.
ಎಕರೆಗೆ 2 ಕೆಜಿ. ಬೀಜ ಬಿತ್ತನೆ ಮಾಡಬಹುದಾಗಿದೆ. ಮತ್ತು ಎಕರೆಗೆ 20 ಕೆಜಿ. ಸಾರಜನಕ, 10 ಕೆಜಿ. ರಂಜಕ ನೀಡಿದರೆ ಎಕರೆಗೆ ಸುಮಾರು 8 ರಿಂದ 10 ಕ್ವಿಂಟಾಲ್ ಕಾಳಿನ ಇಳುವರಿ ಮತ್ತು 4 ಟನ್‌ನಷ್ಟು ಮೇವಿನ ಇಳುವರಿಯನ್ನು ಈ ತಳಿಯಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಗುಳದಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕರು ಮತ್ತು ಬೀಜ ವಿಜ್ಞಾನಿ ಡಾ. ಹನುಮಂತಪ್ಪ ದಾಸನಳ್ಳಿ ಅವರು ತಳಿಯ ಕುರಿತು ತಿಳಿಸಿದರು. ಈ ಬೆಳೆಯನ್ನು ತೊಗರಿ ಮುಂತಾದ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆದಲ್ಲಿ ರೈತರು ಹೆಚ್ಚಿನ ಲಾಭ ಪಡೆಯಬಹುದೆಂದು ಮಾಹಿತಿ ನೀಡಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಅವರು ಮಾತನಾಡಿ, ಸಜ್ಜೆ ಬೆಳೆಗೆ ತಗಲುವ ಕೀಟ ರೋಗಗಳು ಮತ್ತು ಅವುಗಳ ಹತೋಟಿ ಕುರಿತು ಮಾಹಿತಿ ನೀಡಿದರು. ಎಕರೆಗೆ ಸುಮಾರು ರೂ.5,000 ಖರ್ಚು ತಗುಲಬಹುದಾದ ಈ ಬೆಳೆಗೆ ಈಗಿನ ಸರಕಾರ ಸೂಚಿಸಿದ ಬೆಂಬಲ ಬೆಲೆಗೆ ಅನುಗುಣವಾಗಿ ಎಕರೆಗೆ ರೂ.20,000ಕ್ಕಿಂತ ಹೆಚ್ಚು ನಿವ್ವಳ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಕಾಶ ಬಣಕಾರ, ಕ್ಷೇತ್ರ ಸಹಾಯಕರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ವಣಗೇರಿ ಗ್ರಾಮದ ಮಾಜಿ ಅಧ್ಯಕ್ಷರಾದ ಶಿವಮೂರ್ತಯ್ಯ, ಕೃಷಿ ಪರಿಕರಗಳ ಮಾರಾಟಗಾರರಾದ ಕಲ್ಯಾಣಯ್ಯ ಓಲಿ ಹಾಗೂ ಹತ್ತು ಜನ ಫಲಾನುಭವಿ ರೈತರು ಮತ್ತು ಗ್ರಾಮದ 30 ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";