ಸಿಂಧನೂರು.ಸ,೧೯: ಇದೇ ತಿಂಗಳು ೨೧ ರಂದು ತಾಲೂಕಾ ಖಾಸಗಿ ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದಿಂದ ೯ ನೇ ವರ್ಷದ ಗುರುವಂದನಾ ಕಾರ್ಯಕ್ರಮವನ್ನು ನಗರದ ಸತ್ಯ ಗಾರ್ಡನ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರನಾಥ ವೈ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ದಶಕಗಳ ಕಾಲ ಕಾರ್ಯ ನಿರ್ವಹಿಸಿದ ಉಪಾಧ್ಯಾಯ ಹಾಗೂ ಉಪನ್ಯಾಸಕರಿಗೆ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾಡುತ್ತಿದ್ದೇವೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಗುರುತಿಸುವುದಿಲ್ಲ. ಹೀಗಾಗಿ ಖಾಸಗಿಯವರು ನಾವು ನಮ್ಮ ಒಕ್ಕೂಟದ ವತಿಯಿಂದ ಸನ್ಮಾನ ಮಾಡುತ್ತಿದ್ದೇವೆ. ಜೊತೆಗೆ ಶಿಕ್ಷಕರು ತಮ್ಮ ಜವಾಬ್ದಾರಿ ಹೇಗೆ ನಿರ್ವಹಿಸಬೇಕೆಂಬ ಸಂದೇಶವಿರುತ್ತದೆ. ಸನ್ಮಾನಿತಗೊಂಡ ಶಿಕ್ಷಕರಿಗಾಗಿ ೩೦ ಗ್ರಾಂ ಬೆಳ್ಳಿ, ೧ ಗ್ರಾಂ ಬಂಗಾರದ ನಾಣ್ಯಗಳ ಕೊಡುಗೆ ಡಿಪ್ ಮೂಲಕ ಡ್ರಾ ಮಾಡಿ ಆಯ್ಕೆಯಾದವರಿಗೆ ವಿತರಿಸಲಾಗುವುದು. ಈ
ಬಂಗಾರ ನಾಣ್ಯದ ಕೊಡುಗೆ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ಮಲ್ಲನಗೌಡ ಕಾನಿಹಾಳ, ಹಾಗೂ ಬೆಳ್ಳಿಯ ಕೊಡುಗೆ ಗೌರವಾಧ್ಯಕ್ಷ ಡಾ.ಶಿವರಾಜ ಕೆ, ದಾನಿಗಳಾಗಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕರು ಹಾಗೂ ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಡಿವೈಎಸ್ಪಿ ಬಿ.ಎಸ್.ತಳವಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಬಸವಲಿಂಗಪ್ಪ, ಹಾಗೂ ಶಿಕ್ಷಣ ಪ್ರೇಮಿಗಳು ಮತ್ತು ಪ್ರಧಾನ ಭಾಷಣಕಾರರಾದ ಮುಕ್ಕುಂದ್ ಮೈಗೂರ್ ಧಾರವಾಡ ಇವರು ಭಾಗವಹಿಸುವರು ಎಂದರು.
ಈ ಸಂದರ್ಭದಲ್ಲಿ: ಆರ್.ಸಿ.ಪಾಟೀಲ್, ತನುವೀರ್, ವೀರೇಶ ಅಗ್ನಿ, ಗ್ಯಾನಪ್ಪ ಕನ್ನಂಪೇಟೆ, ಡಿ.ಎಚ್.ಕಂಬಳಿ, ಅಶೋಕ ಬೆನ್ನೂರು, ಸೇರಿದಂತೆ ಅನೇಕರಿದ್ದರು.