ರಾಯಚೂರು: ಮೇ-29:
ಜಿಲ್ಲೆಯಲ್ಲಿ ಅವಧಿಗೆ ಮುಂಚೆ ಅಧಿಕಾರಿಗಳ ವರ್ಗಾವಣೆಯನ್ನು ವಿರೋಧಿಸಿ ಗ್ರಾಮೀಣ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ, ಹಿಂದುಳಿದ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಮೂರು ವರ್ಷ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡುತಿರುವದು ಅಭಿವೃದ್ದಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ವೈಯಕ್ತಿಕ ಲಾಭಕ್ಕಾಗಿ ಅಕಾಲಿಕವಾಗಿ ಅಧಿಕಾರಿಗಳ ವರ್ಗಾವಣೆ ಒತ್ತಡ ತರುವದು ಹೆಚ್ಚಳವಾಗುತ್ತಿದೆ. ತಮಗೆ ಅನುಕೂಲವಾಗದೇ ಹೋದರೆ ವರ್ಗಾವಣೆ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಪ್ರೇರಿತವಾಗಿ ನಡೆಯುತ್ತಿರುವ ವರ್ಗಾವಣೆಯನ್ನು ತಡೆಯಬೇಕೆಂದು ಒತ್ತಾಯಿಸಿದರು.ರಾಜ್ಯ ಸರಕಾರ ವರ್ಗಾವಣೆ ನೀತಿಯನ್ನು ಅನುಸರಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಇತ್ತೀಚಿಗೆ ನಡೆದ ಸಾರ್ವತ್ರಿಕ ಶಿಕ್ಷಕರ ವರ್ಗಾವಣೆಯಲ್ಲಿ ಪೂರ್ವಪರ ಯೋಜನೆಇಲ್ಲದೇ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದರಿಂದ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಅನೇಕ ಇಳಾಖೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಯಿತು. ಸರಕಾರಿ ಕಛೇರಿಗಳಲ್ಲಿ ಕೆಲಸ ಮಾಡುವವರೇ ಇಲ್ಲದೇ ಇರುವಾಗ ಅಭಿವೃದ್ದಿಯನ್ನು ನಿರೀಕ್ಷಿಸುವದಾದರು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆ ರಾಜಕೀಯ ಪ್ರಭಾವದಿಂದ ನಡೆಸದೇ ಇರಲು ಮುಖ್ಯ ಮಂತ್ರಿಗಳು ಮುಂದಾಗಬೇಕು, ಅವಧಿಗೆ ಮುಂಚೆಯೇ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಗ್ರಾಮೀಣ ಕೃಷಿ ಕೂಲಿಕಾರರ ಸಂಘದ ಗುರುರಾಜ, ಬಸವರಾಜ ಗಬ್ಬೂರು, ಶಾಂಭವಿ, ಈರಮ್ಮ, ಆಂಜಿನೇಯ್ಯ, ಮಾರೆಮ್ಮ, ವಿದ್ಯಾ ಪಾಟೀಲ್, ಮೋಕ್ಷಮ್ಮ, ರಾಘವೇಂದ್ರ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದರು.