ರಾಯಚೂರು: ಮೇ-24:
ಮಾವಿನಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ನಗರಸಭೆ ಅಧಿಕಾರಿಗಳು ಖಾಸಗೀ ವ್ಯಕ್ತಿಗಳೊಂದಿಗೆ ಶಾಮೀಲಾಗಿ ೧೦ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಅತಿಕ್ರಮಿಸಿದ ವ್ಯಕಿಗಳು ಮೇಲೆ ಕಾನೂನು ಕ್ರಮ ಜರುಗಿಸಿ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಐತಿಹಾಸಿಕ ಮಾವಿನಕೆರೆ ಸುತ್ತಲ್ಲಿನ ಪ್ರದೇಶದಲ್ಲಿ ರಾಜಾರೋಷವಾಗಿ ಕೆರೆ ಜಾಗವನ್ನು ಒತ್ತುವರಿ ಮಾಡಿದ ಖಾಸಗೀ ವ್ಯಕ್ತಿಗಳು ೧೦ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮಳಿಗೆ ನಿರ್ಮಾಣದಲ್ಲಿ ಕೆಲ ನಗರಸಭೆ ಅಧಿಕಾರಿಗಳು ಕೈ ಜೋಡಿಸಿದ್ದಾರೆಂದು ದೂರಿದ್ದಾರೆ.
ಈ ಹಿಂದೆ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾವಿನ ಕೆರೆ ಅಭಿವೃದ್ದಿಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕೆರೆಯ ಜಾಗ ಒತ್ತುವರಿಯಾದಂತೆ ಹದ್ದುಬಸ್ತು ಮಾಡಲು ನ್ಯಾಯಾಧೀಶರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಮತ್ತು ಸಚಿವ ಎನ್.ಎಸ್.ಬೋಸರಾಜ್ ಅವರು ಕೆರೆ ಅಭಿವೃದ್ದಿಗೆ ಇಲಾಖೆಯಿಮದ ೫ ಕೋ. ರೂ.ಅನುದಾನ ಮಂಜೂರು ಮಾಡಿದ್ದಾರೆ.
ಆದರೂ ಕೆರೆ ಜಾಗ ಒತ್ತುವರಿಗೆ ನಗರಸಭೆ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆಂದು ದೂರಿದರು. ತಕ್ಷಣ ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳನ್ನು ತೆರವುಗೊಳಿಸಿ ಅತಿಕ್ರಮಣ ಮಾಡಿದ ವ್ಯಕ್ತಿಗಳ ಮೇಲೆ ಹಾಗೂ ಸಾಥ್ ನೀಡಿದ ನಗರಸಭೆ ಅಧಿಕಾರಿಗಳ ಮೇಲ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವು ಕುಮಾರ ಯಾದವ, ಕರುಣಾಕರೆಡ್ಡಿ, ಜಾಫರ್ ತರೀಖ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.