ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ: ನೈಜ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ

Eshanya Times

ರಾಯಚೂರು: 

13 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ‘ನ್ಯಾಯಕ್ಕಾಗಿ ಜನಾಗ್ರಹ’ ಧರಣಿ ಸತ್ಯಾಗ್ರಹವು  ರಾಯಚೂರು ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಗುರುವಾರ ನಡೆಯಿತು.

ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ ಅಕ್ಟೋಬರ್ 09 ರಂದು 13 ವರ್ಷಗಳು ಗತಿಸಿದಂತಾಗುತ್ತದೆ.  ಇನ್ನೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಮತ್ತು ಧರ್ಮಸ್ಥಳದಲ್ಲಿ ದಾಖಲಾದ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರ, ಭೂ ಹಗರಣ, ದಲಿತರಿಗೆ ಸೇರಿದ ಭೂಮಿಯ ಕಬಳಿಕೆ, ಬಡ್ಡಿ ದಂಧೆಯ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ದೊರಕದ ಹಿನ್ನಲೆಯಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ರಾಜ್ಯವ್ಯಾಪಿ ‘ನ್ಯಾಯಕ್ಕಾಗಿ  ಜನಾಗ್ರಹ ಹೋರಾಟಕ್ಕೆ ಕರೆ ಕೊಟ್ಟಿರುವ ಭಾಗವಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಆಗ್ರಹ ಪತ್ರ ಸಲ್ಲಿಸಲಾಯಿತು.

ಹಕ್ಕೊತ್ತಾಯಗಳು :

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ, ಪ್ರಕರಣದ ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ’ ಎಂಬ ವಿಶೇಷ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಬೇಕು.

ಸರ್ಕಾರವು 19.07.2025ರಂದು ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ (2005 ರಿಂದ 2025) ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಶವ ಹೂತಿಟ್ಟ ಪ್ರಕರಣ, ನೂರಾರು ಹುಡುಗಿಯರ ನಾಪತ್ತೆ ಪ್ರಕರಣವನ್ನು ಭೇದಿಸಲು ಎಸ್.ಐ.ಟಿ. ರಚಿಸಿದ್ದು, ಅದರಂತೆ ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ದಾಖಲಾದ ಪ್ರಕರಣಗಳ ತನಿಖೆಯನ್ನು ಎಸ್.ಐ.ಟಿ.ನಡೆಸಬೇಕು.

ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು. ವಿರೋಧ ಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ಎಸ್ಐಟಿ ತನಿಖೆ ಮತ್ತು ಸಾಕ್ಷಿ/ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು ಅದನ್ನು ನಿಲ್ಲಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಜನಪರ ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವನ್ನೂ ನಿಯಂತ್ರಿಸಿ, ಎಸ್ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯುವಂತೆ ಕ್ರಮ ವಹಿಸಬೇಕು.

ಕಳೆದ 20 ವರ್ಷಗಳ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್.ಐ.ಟಿ ರಚನೆಯ ಸಂಬAಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು. ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಈಗ ರಚಿಸಲಾಗಿರುವ ಎಸ್ ಐ ಟಿ ಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಿದರೆ ಸೌಜನ್ಯರಿಗೂ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯತತ್ಪರವಾಗಬೇಕೆಂದು ಎಂದು ಆಗ್ರಹ ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಸಾಹಿತಿಗಳಾದ ಅಂಜಿನೇಯ್ಯ ಜಾಲಿಬೆಂಚಿ.ಬಶೀರ ಅಹಮದ್, ಕೆ.ಜಿ.ವಿರೇಶ್. ಹೆಚ್.ಪದ್ಮಾ. ವರಲಕ್ಷ್ಮೀ , ಸುಲೋಚನಾ,  ಸಾಜೀದ್ ಹುಸೇನ್, ಪಾಲ ಪ್ರಸಾದ್, ಡಿ.ಎಸ್.ಶರಣಬಸವ., ಶ್ರೀನಿವಾಸ ಕಲವಲದೊಡ್ಡಿ, ಇಂದಿರಾ,  ಮಮತಾ  ಸೇರಿದಂತೆ ಅನೇಕರು ಭಾಗವಹಿಸಿದ್ದರು

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";