ದೇವದುರ್ಗ:
ತಾಲೂಕಿನ ಕಮದಾಳ ಗ್ರಾಮದಲ್ಲಿ ೩ ಜನರ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ಜರುಗಿದೆ.
ಗುಡ್ಡದ ಪಕ್ಕದಲ್ಲಿರುವ ಮನೆಯೊಂದರ ಬಾಲಕ ಭಾನುವಾರ ಬೆಳಿಗ್ಗೆ ೧೦-೩೦ಗಂಟೆಗೆ ಬರ್ಹಿದೆಸೆಗೆ ಹೋದಾಗ ಚಿರತೆಯನ್ನು ನೋಡಿದ್ದ.ಬಳಿಕ ಮನೆಗೆ ಬಂದು ಪಾಲಕರಿಗೆ ತಿಳಿಸಿದ್ದಾನೆ.ಅಲ್ಲೇ ಇದ್ದವರು ಚಿರತೆ ಹೌದೋ,ಇಲ್ಲವೋ ಎಂದು ನೋಡಲು ಹೋದಾಗ,ಗಲಾಟೆಗೆ ಬೆದರಿದ ಚಿರತೆ ದಿಢೀರ ದಾಳಿ ನಡೆಸಿ ೩ಜನರ ಮೇಲೆ ದಾಳಿ ಮಾಡಿದೆ.
ಸಣ್ಣ ಪುಟ್ಟಗಾಯಗಳಾಗಿದ್ದು ರಮೇಶ,ಮಲ್ಲಣ್ಣ ಹಾಗೂ ರಂಗಣ್ಣ ಕಮದಾಳ ,ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿರತೆ ದಾಳಿ ಘಟನೆಯಿಂದ ಕಮದಾಳ,ದೇವರಗುಡ್ಡ ಸೇರಿದಂತೆ ಸುತ್ತಲಿನ ಗ್ರಾಮಸ್ತರು ಭಯಭೀತರಾಗಿದ್ದಾರೆ.
ಕಮದಾಳ ಗ್ರಾಮದ ಪಕ್ಕದಲ್ಲಿರುವ ದೇವರಗುಡ್ಡದಲ್ಲಿ ಕಳೆದ ೨ ತಿಂಗಳಿನಿAದ ಇದೆ ಚಿರತೆಯನ್ನು ಕೆಲವರು ನೋಡಿದ್ದಾರೆ ಎನ್ನಲಾಗಿದೆ.ಒಂದೆರಡು ಆಕಳುಗಳ ಮೇಲೂ ಚಿರತೆ ದಾಳಿ ಮಾಡಿತ್ತು.ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ವಾರದಿಂದ ಚಿರತೆ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.ಕಮದಾಳ ಗ್ರಾಮದ ಪಕ್ಕದಲ್ಲಿಯೇ ಇರುವ ಗುಡ್ಡದಲ್ಲಿ ಚಿರತೆ ಇದ್ದು,ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಹಾಕಿ ಹಿಡಿಯಲು ಪ್ರಯತ್ನ ನಡೆಸಿದ್ದಾರೆ.ಸುತ್ತಲಿನ ಗ್ರಾಮಸ್ತರು ಜಾಗುರಕತೆ ವಹಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಿರತೆಯ ಕೊಲೆ!
ದಾಳಿ ನಂತರ, ಚಿರತೆಗಾಗಿ ಹುಡುಕಾಟ ನಡೆಸಿದ ಸಾವಿರಾರು ಜನರು, ಕೆಲ ಗಂಟೆಗಳಲ್ಲೇ ಚಿರತೆಯನ್ನು ಪತ್ತೆ ಹಚ್ಚಿ, ಈ ವೇಳೆ ಚಿರತೆ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ನಂತರ ಮೃತ ಚಿರತೆಯನ್ನು ಗುಡ್ಡದ ಕಲ್ಲು ಬಂಡೆಗಳ ಮಧ್ಯದಿಂದ ಹಿಡಿದು ಹೊರ ತಂದಿರುವ ದೃಶ್ಯಗಳು ಮೊಬೈಲ್‌ಗಳಲ್ಲಿ ಸೆರೆಯಾಗಿದೆ.ಮೃತ ಗಂಡು ಚಿರತೆಯನ್ನು ಮರಣೋತ್ತರ ಪರೀಕ್ಷೆಗಾಗಿ ದೇವದುರ್ಗದ ಪಶು ಆಸ್ಪತ್ರೆಗೆ ರವಾನಿಸಲಾಗಿದೆ.