ಲಿಂಗಸುಗೂರು : ತಹಶೀಲ್ದಾರ ಕಛೇರಿಯಲ್ಲಿ ನಡೆದಿರುವ 1.87 ಕೋಟಿ ಹಗರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಪದಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಕೋಟಿ ಕೋಟಿ ಹಗರಣ ನಡೆದರು ಕೂಡ ಜಾಣ ಕುರುಡುತನ ಪ್ರದರ್ಶಿಸಿ, ಪ್ರಕರಣಕ್ಕೆ ತೆಪೆ ಹಚ್ಚುವುದಕ್ಕಾಗಿ 20 ದಿನಗಳ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಪೊಲೀಸರು ಯಲ್ಲಪ್ಪ ಹಾಗೂ ಗುತ್ತಿಗೆ ಸಿಬ್ಬಂದಿಯೊಬ್ಬರನ್ನು ಬಂಧಿಸಿ ಕೈತೊಳೆದುಕೊಂಡಿದ್ದಾರೆ. ಆದರೆ ಈ ಪ್ರಕರಣದ ಪ್ರಮುಖ ಆರೋಪಿ ತಹಶೀಲ್ದಾರ ಇವರನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ.
ಈ ಪ್ರಕರಣದಲ್ಲಿ ಯಲ್ಲಪ್ಪ ಎಫ್‌ಡಿಎ ಇವರಿಗೆ ತಹಶೀಲ್ದಾ ಕಛೇರಿಯಲ್ಲಿ ಶಾಖೆಯ ಸಂಕಲನಗಳ ಜವಾಬ್ದಾರಿಯನ್ನು ನಿರ್ವಹಿಸವ ಆದೇಶವನ್ನು ನೀಡಲಾಗಿತ್ತು. ಸರ್ಕಾರದ ಆದೇಶದಂತೆ ಮಹಾ ಪುರಷರ ಜಯಂತಿ ಆಚರಣೆ ಮಾಡುವ ಸಂಕಲವನ್ನು ಮಾತ್ರ ಇವರಿಗೆ ನೀಡಲಾಗಿತ್ತು. ಅಂದರೆ ಇವರು ಹೇಗೆ ಚೆಕ್‌ಗಳ ಮೇಲೆ ನಕಲಿ ಸಹಿ ಮಾಡಲು ಸಾಧ್ಯ.
ನಿಯಮಗಳ ಪ್ರಕಾರ ತಹಶೀಲ್ದಾರರ ಅನುಮತಿ ಇಲ್ಲದೇ ಚೆಕ್‌ಗಳನ್ನು ಹೊರತೆಗೆಯಲು ಸಾಧ್ಯವಿಲ್ಲ. ಎಲ್ಲಾ ಚೆಕ್‌ಗಳು ಅವರ ಅಧೀನದಲ್ಲಿರುತ್ತವೆ. ಒಂದು ರೂಪಾಯಿ ಪಡೆಯಬೇಕೆಂದರು ಅವರ ಅನುಮತಿ ಪಡೆದು ಅವರ ಸಹಿ ಪಡೆದ ಮೇಲೆಯೇ ಚೆಕ್‌ಗಳನ್ನು ತೆಗೆದುಕೊಳ್ಳುವ ಅವಕಾಶವಿರುತ್ತದೆ. ಹಾಗಿದ್ದಾಗ ಚೆಕ್‌ಗಳು ಹೇಗೆ ಹೊರತೆಗೆಯಲಾಯಿತು ಮತ್ತು ಅವುಗಳ ಮೇಲೆ ನಕಲಿ ಸಹಿ ಹೇಗೆ ಮಾಡಲಾಯಿತ್ತು ಎಂಬುವುದೇ ಹಲವಾರು ಅನುಮಾನಗಳಿಗೆ ಸಾರ್ವಜನಿಕರಲ್ಲಿ ಕಾಡುತ್ತಿವೆ.
ಕೂಡಲೇ ಈ ಹಗರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸಿ ಹಗರಣದಲ್ಲಿ ಭಾಗಿಯಾಗಿರುವ ತಹಶೀಲ್ದಾರ ಹಾಗೂ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಸರ್ಕಾರದ ಹಣವನ್ನು ಮರಳಿ ಪಡೆಯಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ, ಯಲ್ಲಪ್ಪ ಹಾಲಭಾವಿ, ಅಕ್ರಮಪಾಷಾ, ಹುಸೇನಪ್ಪ ನಾಯಕ, ಹನುಮೇಶ ಕುಪ್ಪಿಗುಡ್ಡ, ಸಂಜೀವಮೂರ್ತಿ ಸೇರಿದಂತೆ ಇದ್ದರು.