ರಾಯಚೂರು,ಜ.15: ಕೆಎಸ್ಎನ್ ಸಾಮಾಜಿಕ ಸೇವಾ ಸಮಿತಿ ಮಾನ್ವಿ-ಸಿರವಾರ ವತಿಯಿಂದ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಸಾರಥ್ಯದಲ್ಲಿ ಸಾಮೂಹಿಕ ಮದುವೆ ಸಮಾರಂಭವನ್ನು ಮಾನ್ವಿಯ ರಾಯಚೂರು ಮುಖ್ಯರಸ್ತೆಯಲ್ಲಿರುವ ಲೋಯಲಾ ಶಾಲೆಯ ಹತ್ತಿರ ಜನವರಿ 19 ರಂದು ಬೆಳಿಗ್ಗೆ 10 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ತಿಮ್ಮಾರೆಡ್ಡಿಗೌಡ ಭೋಗಾವತಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್ಎನ್ ಕೆಎಸ್ಎನ್ ಸಾಮಾಜಿಕ ಸೇವಾ ಸಮಿತಿ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ. ಕೊರೋನಾ ಸಂದರ್ಭದಲ್ಲಿ 4800 ಕ್ವಿಂಟಾಲ್ ನಷ್ಟು ಅಕ್ಕಿ ಖರ್ಚು ಮಾಡಿ, ಮನೆ ಮನೆಗೆ ಅನ್ನದ ಪೊಟ್ಟಣವನ್ನು ತಲುಪಿಸುವ ಮಹತ್ತರ ಕಾರ್ಯವನ್ನು ನಿರ್ವಹಿಸಿದ್ದಲ್ಲದೆ, 5 ಲಕ್ಷ ಮಾಸ್ಕ್ ಗಳನ್ನುಜನರ ಒಳಿತಿಗಾಗಿ ಹಂಚಲಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಬಂಧುಗಳಿಗೆ ಆಹಾರ ಸಾಮಾಗ್ರಿ ಕಿಟ್ ಗಳನ್ನು ವಿತರಿಸಲಾಗಿತ್ತು. ಮಾನ್ವಿ ಸಿರವಾರ ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ದೇವಸ್ಥಾನಗಳಿಗೆ ದೇಣಿಗೆಯನ್ನು ನೀಡಲಾಗಿದೆ ಎಂದು ಸಮಿತಿಯ ಕಾರ್ಯ ವೈಖರಿಗಳನ್ನು ವಿವರಿಸಿದರು.
ಯುವಕರನ್ನು ಉತ್ತೇಜಿಸಲು, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಲು ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಅತ್ಯಂತ ಅಚ್ಚಕಟ್ಟಾಗಿ ಅಭೂತಪೂರ್ವವಾಗಿ ಆಯೋಜಿಸಿ ಸೈ ಎನಿಸಿಕೊಂಡಲ್ಲದೆ, ವಾಲಿಬಾಲ್ ಗಳಂತಹ ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಕ್ರಿಕೆಟ್ ಟೂರ್ನಾಮೆಂಟ್ ಗಳಿಗೂ ಸಹಾಯ ಸಹಕಾರ ನೀಡಲಾಗಿದೆ ಎಂದ ಅವರು, ಈಗ 5001 ಕ್ಕಿಂತ ಹೆಚ್ಚು ಸರ್ವ ಧರ್ಮಗಳ ಸಾಮೂಹಿಕ ವಿವಾಹಗಳನ್ನು ನಡೆಸಬೇಕೆಂದು ಸಂಕಲ್ಪ ಮಾಡಲಾಗಿತ್ತು. ಈಗಾಗಲೇ 100 ಅಧಿಕ ಜೋಡಿಗಳು ಹೆಸರು ನೋಂದಾಯಿಸಿಕೊಂಡಿದ್ದು ಇನ್ನೂ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಬೇರೆ ತಾಲೂಕಿನವರು ಬಂದರೂ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ ಅವರು ಸಮಾರಂಭಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ಸಿರಿ ಬಂದ ಕಾಲಕ್ಕೆ ಕರೆದ ದಾನವ ಮಾಡು ಎನ್ನುವಂತೆ ಮಾಜಿ ಸಚಿವ, ಜನಾನುರಾಗಿ ಕೆ. ಶಿವನಗೌಡ ನಾಯಕ ಅವರು ಕೊಡುಗೈ ದಾನಿಯಾಗಿದ್ದಾರೆ. ಬಡವರ ಸಂಕಷ್ಟಕ್ಕೆ ಅನುಕೂಲವಾಗುವಂತಹ ಇಂತಹ ಮಹತ್ತರ ಕಾರ್ಯಕ್ರಮ ಮಾಡುವುದಕ್ಕೆ ಧೈರ್ಯ ಹಾಗೂ ದಾನಗುಣ ಬೇಕಾಗುತ್ತದೆ. ಅದು ಕೆ. ಶಿವನಗೌಡ ನಾಯಕ ಅವರಿಗೆ ಇದೆ ಎಂದು ಹೇಳಿದ ಅವರು, ಸಮಾರಂಭಕ್ಕೆ ಶಿಕಾರಿಪುರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಲಿದ್ದು, ಕೇಂದ್ರ ಸರಕಾರದ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ,ಮಾಜಿ ಶಾಸಕ ಬಿ. ಶ್ರೀರಾಮುಲು, ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಬೆಂಗಳೂರು ಶಾಸಕ ಬೈರತಿ ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರಶಾಸಕ ಡಾ. ಎಸ್.ಶಿವರಾಜ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಎನ್. ಶಂಕ್ರಪ್ಪ, ರಾಜ್ಯ ಕುರುಬ ಸಮಾಜದ ರಾಜ್ಯಾಧ್ಯಕ್ಷ ಎಂ. ಈರಣ್ಣ, ಪ್ರಥಮ ದರ್ಜೆ ಗುತ್ತಿಗೆದಾರ ಸೈಯದ್ ಅಕ್ಬರ್ ಸಾಬ್ ಘನ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಲೋಕಸಭಾ ಸದಸ್ಯ ಬಿ.ವಿ.ನಾಯಕ ಬಿ.ವಿ.ನಾಯಕ ವಹಿಸಲಿದ್ದು, ಮಾಜಿ ಸಚಿವ ಕೆ. ಶಿವನಗೌಡ ಉಪಸ್ಥಿತರಿರಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ & ತಂತ್ರಜ್ಞಾನ ಸಚಿವ ಸಚಿವ ಎನ್.ಎಸ್. ಬೋಸರಾಜು, ಮಾನ್ವಿ ಶಾಸಕ ಜಿ. ಹಂಪಯ್ಯನಾಯಕ, ರಾಯಚೂರು ಗ್ರಾಮೀಣ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್, ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರು, ದೇವದುರ್ಗ, ಸಿರವಾರ, ಮಾನವಿಯ ಪ್ರಮುಖ ಮಠಾಧೀಶರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ರಮಾನಂದ ಯಾದವ್, ರಾಘವೇಂದ್ರ ಉಟ್ಕೂರು, ಶಂಕರಗೌಡ, ಶರಣಪ್ಪಗೌಡ, ಜಂಬಣ್ಣ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.