ರಾಯಚೂರು: ಸಿ.ಸಿ ಕ್ಯಾಮರಾ ಅಳವಡಿಕೆಯಿಂದ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಹೇಳಿದರು.
ನಗರದ ಚಂದ್ರಮೌಳೇಶ್ವರ ವೃತ್ತ, ಜಾಕೀರ ಹುಸೇನ್ ವೃತ್ತದಲ್ಲಿ ಭದ್ರತೆಗೋಸ್ಕರ ಅಳವಡಿಸಲಾದ ಸಿ.ಸಿ. ಕ್ಯಾಮರಾಗಳ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ವೃತ್ತಗಳನ್ನು ಗುರುತಿಸಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು, ವ್ಯವಹಾರದ ಅಂಗಡಿಗಳು, ಇಂಡಸ್ಟ್ರೀಯಲ್ ಏರಿಯಾಗಳು, ಮದ್ಯದಂಗಡಿಗಳು, ಮಠ, ಮಂದಿರ, ಚರ್ಚ್ ಹಾಗೂ ಮಸೀದಿಗಳು, ಅತೀ ಮುಖ್ಯವಾದ ರಸ್ತೆಗಳು, ಎಲ್ಲಾ ರೀತಿಯ ಕ್ರೀಡಾಂಗಣಗಳು, ಈಜು ಕೊಳಗಳು, ಶಾಲಾ ಕಾಲೇಜ್ ಗಳು, ತರಕಾರಿ ಮಾರುಕಟ್ಟೆಗಳು, ಗಂಜ್ ಏರಿಯಾಗಳಲ್ಲಿ, ಬೈಪಾಸ್ ರಸ್ತೆಗಳಲ್ಲಿ, ಮಾವಿನ ಕೆರೆ, ಖಾಸಭಾವಿ, ರೈಲ್ವೇ ಸ್ಟೇಷನ್, ರೇಡಿಯೋ ಸ್ಟೇಷನ್, ದೊಡ್ಡ ದೊಡ್ಡ ಆಸ್ಪತ್ರೆಗಳು, ಕೆಲವು ಸಂಘ ಸಂಸ್ಥೆಗಳ ಕಛೇರಿಗಳು, ಚಿತ್ರ ಮಂದಿರಗಳು ಹಾಗೂ ಇನ್ನಿತರ ಎಲ್ಲಾ ಏರಿಯಗಳನ್ನು ಗಮನಿಸಿ ಸೂಕ್ತ ಭದ್ರತೆಯ ಮುನ್ನೆಚ್ಚರಿಕೆಗೋಸ್ಕರವಾಗಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಕಳೆದುಕೊಂಡಂಥ ಅಂದಾಜು 22 ಮೊಬೈಲ್ ಗಳನ್ನು ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಸ್ವತ್ತಿನ ಮಾಲೀಕರಿಗೆ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಡಿ.ವೈ.ಎಸ್.ಪಿ. ಹೆಚ್. ಸತ್ಯನಾರಾಯಣ, ಠಾಣೆಯ ಸಿ.ಪಿ.ಐ. ಉಮೇಶ ಕಾಂಬ್ಳೆ ಮೊಬೈಲ್ ಗಳನ್ನು ವಿತರಿಸಿದರು.
ತಮ್ಮ ಬಂಧು ಬಾಂಧವರ ನಂಬರಗಳು ಮತ್ತು ಕಳೆದುಕೊಂಡಂಥ ಡೆಟಾಗಳು ಮರಳಿ ಸಿಕ್ಕ ಸಂಭ್ರಮದಲ್ಲಿ ಮೊಬೈಲ್ ಹುಡುಕಿಕೊಟ್ಟ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದವರ ರೀತಿಯಲ್ಲಿ ನಗುನಗುತ್ತಾ ತಮ್ಮ ತಮ್ಮ ಮೊಬೆಲ್ ಗಳನ್ನು ಸ್ವೀಕರಿಸಿದರು.
ನಂತರ ಮಾತನಾಡಿದ ಎಂ. ಪುಟ್ಟಮಾದಯ್ಯ ಅವರು ಬೆಲೆ ಬಾಳುವ ಮೊಬೈಲ್ ಮೇಲೆ ತಮ್ಮ ನಿಗಾ ಇರಬೇಕು, ಮೊಬೆಲ್ ನೆಟ್ ವರ್ಕ್ ಎಂದರೆ ಕೆಟ್ಟದ್ದಕ್ಕೂ ಇದೆ, ಒಳ್ಳೆಯ ಕೆಲಸಕ್ಕೂ ಇದೆ, ಸಾರ್ವಜನಿಕರು ಮೊಬೈಲನ್ನು ಒಳ್ಳೆಯದಕ್ಕೆ ಮಾತ್ರ ಬಳಸಿ ಎಂದು ಸಲಹೆ ನೀಡಿದ ಅವರು, ಸಿಪಿಐ ಉಮೇಶ ಕಾಂಬ್ಳೆಯವರ ಕರ‍್ಯವೈಖರಿ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಡಿ.ವೈ.ಎಸ್.ಪಿ. ಹೆಚ್. ಸತ್ಯನಾರಾಯಣ, ಠಾಣೆಯ ಸಿ.ಪಿ.ಐ. ಉಮೇಶ ಕಾಂಬ್ಳೆ ಅವರನ್ನು ನಾಗರಿಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ನರಸಮ್ಮ, ಟ್ರಾಫಿಕ್ ಪಿ.ಎಸ್.ಐ ಸಣ್ಣ ಈರಣ್ಣ, ಎ.ಎಸ್.ಐ ಶ್ರೀನಿವಾಸ, ಚಾಂದ್ ಪಾಷಾ ಹೆಚ್.ಸಿ. ಬಸವರಾಜ ಪೋಲೀಸ್ ಹಾಗೂ ಠಾಣೆ ಸರ್ವ ಸಿಬ್ಬಂಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.