ಬಳ್ಳಾರಿ,ಜ.15:
ಸಮುದಾಯದಲ್ಲಿ ದೊಡ್ಡ ಮಟ್ಟದ ಜಾತ್ರೆ, ಊರು ಹಬ್ಬ, ಉತ್ಸವ ಮುಂತಾದ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಜನತೆಯು ಕುಡಿಯಲು ಶುದ್ಧ ನೀರು ಬಳಸಬೇಕು. ಸೇವಿಸುವ ಆಹಾರ ಸಂಪೂರ್ಣವಾಗಿ ಬೇಯಿಸಿ ಸೇವಿಸುವ ಮೂಲಕ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳು ಸಂಭವಿಸದ0ತೆ ಇಲಾಖೆಯ ಜೊತೆಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ಕರ‍್ಲಗುಂದಿ ಗ್ರಾಮದಲ್ಲಿ ಕುಂಭೋತ್ಸವ ಹಿನ್ನಲೆಯಲ್ಲಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು.
ಜಾತ್ರೆ, ಊರ ಹಬ್ಬ ಮತ್ತು ಧಾರ್ಮಿಕ ಆಚರಣೆಗಳು ಸಮಾಜದ ಭಾಗವಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜನ ಸೇರುವುದರಿಂದ ಜನತೆಯು ಕುಡಿಯಲು ಶುಧ್ದ ನೀರು ಬಳಸುವುದು ಹಾಗೂ ಆಹಾರ ಸಿದ್ದಪಡಿಸುವ ಸ್ಥಳದಲ್ಲಿ ಶುಚಿತ್ವ ಕಾಪಾಡುವುದು. ಆಹಾರ ತ್ಯಾಜ್ಯವನ್ನು ಆಯಾ ಗ್ರಾಮ ಪಂಚಾಯಿತಿಯ ನಿರ್ದೇಶನದಂತೆ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರೂ ಹೊಂದಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಅವರ ನೇತೃತ್ವದ ಜಿಲ್ಲಾ ಕಾಲರಾ ನಿಯಂತ್ರಣ ತಂಡ ಗ್ರಾಮದ ನೀರು ಸರಬರಾಜು ವ್ಯವಸ್ಥೆಯ ಮೂಲಗಳು, ನೀರಿನ ಸಂಗ್ರಹಾರಕಗಳು, ನಳಗಳು, ಪೈಪ್‌ಲೈನ್ ಸೇರಿದಂತೆ ಓವರ್‌ಹೆಡ್ ಟ್ಯಾಂಕ್, ಶುದ್ಧ ನೀರಿನ ಘಟಕ ಮುಂತಾದವುಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ಶುದ್ದ ಕುಡಿಯುವ ನೀರನ್ನೇ ಸರಬರಾಜು ಮಾಡಲಾಗುತ್ತಿದ್ದು, ಜನರು ಶುದ್ಧೀಕರಿಸಿದ ನೀರು ಕುಡಿಯಲು ಆದ್ಯತೆ ನೀಡಬೇಕು ಎಂದು ವಿವರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ತೆರೆದಿಟ್ಟ ಆಹಾರ ಪದಾರ್ಥ, ರಸ್ತೆಯ ಅಕ್ಕಪಕ್ಕ ಕೊಯ್ದ ಹಣ್ಣು ಹಂಪಲಗಳನ್ನು ತಿನ್ನಬಾರದು. ಶೌಚದ ನಂತರ ಮತ್ತು ಊಟದ ಮೊದಲು ಹಾಗೂ ತಾಯಂದಿರು ಅಡುಗೆ ಮಾಡುವ ಮೊದಲು ತಪ್ಪದೇ ಕೈಗಳನ್ನು ಸಾಬೂನುನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದು ತಿಳಿಸಿದರು.
ಕುಡಿಯುವ ನೀರನ್ನು ಕುದಿಸಿ ಆರಿಸಿ, ಸೋಸಿ ಕುಡಿಯಬೇಕು. ನೀರಿನ ಸಂಗ್ರಹಕಗಳ ಮೇಲೆ ಮುಚ್ಚಳ ಮುಚ್ಚಬೇಕು. ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಲ ಮೂತ್ರ ವಿಸರ್ಜನೆಗೆ ಶೌಚಾಲ ಬಳಸಬೇಕು. ತಿನ್ನುವ ಆಹಾರ ಪದಾರ್ಥಗಳ ಮೇಲೆ ನೊಣ ಕೂರದಂತೆ ಜಾಗ್ರತೆ ವಹಿಸಬೇಕು. ತಂಗಳ (ಹಳಸಿದ) ಆಹಾರ ಸೇವಿಸಬಾರದು. ಗ್ರಾಮಗಳಲ್ಲಿ ವೈದ್ಯಕೀಯ ತಂಡ ಭೇಟಿ ನೀಡಿ ಜನತೆಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ವೈದ್ಯಾಧಿಕಾರಿಗಳಾದ ಡಾ.ಇರ್ಫಾನ್, ಡಾ.ರಾಜಶೇಖರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಬಿಹೆಚ್‌ಇಒ ಶಾಂತಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುಸ್ತಾಕ್ ಅಹಮ್ಮದ್, ಹೆಚ್‌ಐಒ ಷಣ್ಮುಖಪ್ಪ, ನೀಲಕಂಠಪ್ಪ, ಮಲ್ಲಿಕಾರ್ಜುನ, ಸಿಹೆಚ್‌ಒ ಮೇರಿ, ಮೌನಿಕ, ಮುತ್ತಮ್ಮ, ಪಿಹೆಚ್‌ಸಿಒ ಸುವರ್ಣ, ಅರುಣ ಜ್ಯೋತಿ ಸೇರಿದಂತೆ ಸಾರ್ವಜನಿಕರು ಮತ್ತು ಇತರರು ಇದ್ದರು.