ರಾಯಚೂರು: ಹರಿಯಾಣದ ಶಂಭು ಗಡಿಯಲ್ಲಿ ನಿರಂತರವಾಗಿ ಚಳುವಳಿ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ಇತ್ಯರ್ಥಪಡಿಸಬೇಕೆಂದು ಮತ್ತು ಜಗತ್‌ಸಿಂಗ ದಲ್ಲೇವಾಲ್ ರವರ ಜೀವರಕ್ಷಣೆ ಮಾಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುವಂತೆ ಆಗ್ರಹಿಸಿ, ರೈತ ಚಳುವಳಿಯನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾ ಘಟಕ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.
ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೆ ಭರವಸೆ ನೀಡಿ 2 ವರ್ಷಗಳೇ ಕಳೆದರೂ ಸಹ ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಹಾಗಾಗಿ ಕಳೆದ 3 ತಿಂಗಳುಗಳಿಂದ ಹರಿಯಾಣದ ಶಂಭು ಗಡಿಯಲ್ಲಿ ರೈತರು ಮತ್ತೆ ಚಳುವಳಿಯನ್ನು ಆರಂಭಿಸಿದ್ದಾರೆ. ರೈತ ನಾಯಕ ಜಗತ್‌ಸಿಂಗ್ ದಲ್ಲಿವಾಲ್ ವರವರು ನತದೃಷ್ಟ ರೈತರ ಕಣ್ಣೀರು ಕೊನೆಯಾಗಲಿ ಇಲ್ಲವೇ ನನ್ನ ಉಸಿರು ಕೊನೆಯಾಗಲಿ ಎಂದು ಶಪಥ ಮಾಡಿ, ಸುಮಾರು 46 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ಅವರ ಆರೋಗ್ಯ ಹದಗೆಟ್ಟಿರುವುದರಿಂದ ಮಾತುಕತೆ ಮೂಲಕ ಪರಿಹಾರ ಒದಗಿಸಿ ಜಗತ್ ಸಿಂಗ್ ರವರ ಜೀವ ಉಳಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ಸಹ ಎರಡೂ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣೆಯಲ್ಲಿ ರೈತರಿಗೆ ಕೊಟ್ಟಂತಹ ಭರವಸೆಗಳನ್ನು ಸಂಪೂರ್ಣ ಮರೆತಿವೆ. ರೈತರಿಗೆ ಕೊಡಬೇಕಾದಂತಹ ಸವಲತ್ತುಗಳೆಂದರೆ, ಭೂಮಿ, ನೀರು, ವಿದ್ಯುತ್, ರಸ್ತೆ ಮತ್ತು ರೈತರು ಬೆಳೆದಂತಹ ಬೆಳೆಗೆ ಯೋಗ್ಯವಾದ ಬೆಲೆ ಕೊಡುವುದು ಎರಡೂ ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ಇಲ್ಲಿಯವರೆಗೂ ಏಕೆ ಕೊಟ್ಟಿರುವುದಿಲ್ಲ. ರೈತರ ಬೆಳೆಗಳು ಪ್ರಕೃತಿ ವಿಕೋಪಗಳಾದ ಅತಿವೃಷ್ಟಿ, ಅನಾವೃಷ್ಟಿ ಮತ್ತು ಕೃಷಿ ಮಾರುಕಟ್ಟೆಯಲ್ಲಿ ದಲ್ಲಾಲರ ಮೋಸದ ಬೆಲೆ ನೀತಿಗಳಿಂದ ತತ್ತರಿಸಿದ್ದು ಮತ್ತು ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಸಹ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿವೆ. ರೈತರ ಆತ್ಮಹತ್ಯೆಗಳಿಗೆ ಪರಿಹಾರವೆಂದರೆ ಕೇಂದ್ರ ಸರ್ಕಾರವು ಸ್ವಾಮಿನಾಥನ್ ವರದಿಯನ್ನು ಆಧರಿಸಿ ಘೋಷಿಸಿರುವ ಎಂ.ಎಸ್.ಪಿ. ಬೆಂಬಲ ಬೆಲೆಯನ್ನು ಸಂಸತ್ತಿನಲ್ಲಿ ಕಾಯ್ದೆಯಾಗಿ ಜಾರಿ ಮಾಡಿ ಶೀಘ್ರವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಾ ಮತ್ತು ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಹಾಗೂ ರೈತರು ಬಗರ್‌ಹುಕುಂ ಸಾಗುವಳಿ ಮಾಡಿರುವ ಜಮೀನುಗಳಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು ಮತ್ತು ರೈತರ ಜೀವನಾಡಿಯಾಗಿರುವ ವಿದ್ಯುತ್‌ನ್ನು ಯಾವುದೇ ಕಾರಣದಿಂದ ಖಾಸಗೀಕರಣ ಮಾಡಬಾರದೆಂದು ಒತ್ತಾಯಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕದ ರೈತರ ಅನುಕೂಲಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಅಡಿಗಳಿಗೆ ಹೆಚ್ಚಿಸಬೇಕು. ಈ ಎಲ್ಲಾ ವಿಷಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯವಹಿಸಿದರೆ ರಾಜ್ಯಸಮಿತಿ ಆದೇಶದಂತೆ ದೇಶ ಮತ್ತು ರಾಜ್ಯಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿಯಲ್ಲಿ ಎಚ್ಚರಿಸಿದೆ.
ಬಸವರಾಜ ಗೋಡಿಹಾಳ, ಶಿವಪುತ್ರಗೌಡ ನಂದಿಹಾಳ, ಮಲ್ಲಿಕಾರ್ಜುನ, ಪ್ರಸಾದರೆಡ್ಡಿ, ಆಂಜನೇಯ, ನಿರುಪಾದಿ, ತಾಯಪ್ಪ ಮಸ್ಕಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.