ಬಾಗಲಕೋಟೆ: ರೈತರ ಕಾಳಜಿಯಲ್ಲಿ ಯಾರು ರಾಜಕಾರಣ ಮಾಡುವುದು ಬೇಡ. ನಾವೆಲ್ಲರೂ ಕೂಡಿಕೊಂಡು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳೊಣ. ಎಲ್ಲರೂ ಕೂಡಿಕೊಂಡು ರೈತರ ಪರವಾಗಿ ಪಕ್ಷಾತೀತವಾಗಿ ಉತ್ತಮವಾಗಿ ಕೆಲಸ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದರು.
ಅವರು ಸೋಮವಾರ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ಬಳಿ ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಈ ನೀರಾವರಿ ಯೋಜನೆಯಿಂದ ರಬಕವಿ ಬನಹಟ್ಟಿ ತಾಲ್ಲೂಕಿನ ಮೂರು ಮತ್ತು ಜಮಖಂಡಿ ತಾಲ್ಲೂಕಿನ 13 ಗ್ರಾಮಗಳ ಒಟ್ಟು 9163 ಹೆಕ್ಟರ್ ಪ್ರದೇಶ ಭೂಮಿಗೆ ಅನುಕೂಲವಾಗಲಿದೆ. ಒಟ್ಟು 0.888 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವ ತಿಮ್ಮಾಪುರ ತಿಳಿಸಿದರು.
ರೂ. 73.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಎರಡು ವರ್ಷಗಳಲ್ಲಿ ಮುಗಿಯಬೇಕಾಗಿತ್ತು. ಆರು ವರ್ಷಗಳಾದರೂ ಇನ್ನೂ ಯೋಜನೆ ಪೂರ್ತಿಯಾಗಿಲ್ಲ ಎಂದು ಸಚಿವರು ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಇಂಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಈಗ ಪ್ರಾರಂಭವಾಗಿರುವ ಈ ಯೋಜನೆ ಯಾವುದೇ ಕಾಡರಣಕ್ಕೂ ಬಂದ ಆಗುವುದಿಲ್ಲ. ರೈತರ ಅನುಕೂಲಕ್ಕಾಗಿ ನಾಲ್ಕು ತಿಂಗಳ ಕಾಲ ನಿರಂತರವಾಗಿ ನೀರು ಪೂರೈಸಲು ತಿಳಿಸಿದ್ದೇನೆ ಎಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಸಮೀಪದ ಕುಲಹಳ್ಳಿ ಗ್ರಾಮದಿಂದ ಕೃಷ್ಣಾ ನದಿಯ ನೀರನ್ನು ಏಳು ಕಿ.ಮೀ ದೂರ ಕೊಳವೆ ಮೂಲಕ ನೀರನ್ನು ಎತ್ತುವ ಕಾಮಗಾರಿಯಾಗಿದೆ. ಸರ್ಕಾರ ಆದಷ್ಟು ಬೇಗನೆ ಕಾಮಗಾರಿನ್ನು ಮುಕ್ತಾಯಗೊಳಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ಮುಖ್ಯ ಮಂತ್ರಿಗಳನ್ನು ಕರೆಯಿಸಿ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಕುಲಹಳ್ಳಿ ಹುನ್ನೂರು ಮತ್ತು ಕುಲಹಳ್ಳಿ ವೆಂಕಟೇಶ್ವರ ಏತ ನೀರಾವರಿ ಯೋಜನೆಗಳಿಂದ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲ್ಲೂಕಿನ ರೈತರಿಗೆ ಮತ್ತು ರೈತರ ಭೂಮಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ರೈತರಿಗೆ ಸಂಬAಧಪಟ್ಟ ಯಾವುದೆ ಕಾರ್ಯಗಳಿರಲಿ ಎಲ್ಲರೂ ಪಕ್ಷಾತೀತವಾಗಿ ಕಾರ್ಯ ಮಾಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಎರಡು ತಾಲೂಕಿನ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತಾವು ಸಹಕಾರ ನೀಡಬೇಕು ಎಂದು ಸಚಿವರಲ್ಲಿ ವಿನಂತಿಸಿಕೊ0ಡರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಶ್ರೀಶೈಲ ಕಲ್ಯಾಣಿ, ವಿ.ಎನ್. ನಾಯಕ, ಶಿವಮೂರ್ತಿ, ಎನ್.ಎಂ. ದಿವಟೆ ಸೇರಿದಂತೆ ಅನೇಕರು ಇದ್ದರು.
ರೈತರ ಕಾಳಜಿಯಲ್ಲಿ ರಾಜಕಾರಣ ಬೇಡ: ಸಚಿವ ತಿಮ್ಮಾಪುರ
