ಸಿರುಗುಪ್ಪ.ಆ.೨೩:- ನಗರದಲ್ಲಿ ಢೆಂಘಿ, ಚಿಕನ್‌ಗುನ್ಯ ಹಾವಳಿ ಜೊತೆಗೆ ವೈರಲ್ ಫೀವರ್ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಇದರ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ನಗರಸಭೆಯು ಸ್ವಚ್ಛತೆ ಕಾಪಾಡುವಲ್ಲಿ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲು ವಿಫಲವಾಗಿರುವುದೇ ಢೆಂಘಿ, ಚಿಕನ್‌ಗುನ್ಯಾ, ವೈರಲ್ ಫೀವರ್, ಜ್ವರ ಹರಡಲು ಕಾರಣವಾಗಿದೆ.
ಮಕ್ಕಳು, ವಯಸ್ಸಾದವರಿಗೆ ಸೊಂಕು ಸುಲಭವಾಗಿ ಹರಡಿ ಆಸ್ಪತ್ರೆಗೆ ಅಲೆಯುವಂತಾಗಿದೆ. ನಗರದ ಸರ್ಕಾರಿ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿತ್ಯವೂ ಮಕ್ಕಳು ಮತ್ತು ವೃದ್ಧರು ವೈರಲ್ ಫೀವರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಹೊರ ರೋಗಿಗಳಿಗೆ ಶೇಕಡ ೫೦ಕ್ಕೂ ಹೆಚ್ಚು ಜನ ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಕಳೆದ ಕೆಲವುದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನಗರದಲ್ಲಿ ವ್ಯಾಪಕವಾಗಿ ಸೊಂಕು ಜ್ವರ ಮತ್ತು ಢೆಂಘಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಜ್ವರ ಒಬ್ಬರಿಗೆ ಬಂದರೆ ಮನೆ ಮಂದಿಗೆಲ್ಲ ಕಾಡುತ್ತದೆ. ನೆಗಡಿ, ಕೆಮ್ಮು, ಮೈಕೈ ನೋವಿನಿಂದ ಪ್ರಾರಂಭವಾಗಿ ೫-೬ದಿನ ಬಾದಿಸುತ್ತದೆ. ತಣ್ಣನೆ ವಾತಾವರಣದಿಂದಾಗಿ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಸುಲಭವಾಗಿ ಸೊಂಕು ಹರಡುತ್ತದೆ. ಸೊಂಕು ಕಾರಕ ರೋಗಾಣುಗಳು ಗಾಳಿ ಇತ್ಯಾದಿ ಮಾರ್ಗಗಳಿಗಿಂತಲು ಸೊಳ್ಳೆ ಕಡಿತದ ಮೂಲಕವೇ ಹರಡುವ ಪ್ರಕರಣಗಳು ಹೆಚ್ಚಾಗಿವೆ.
ನಗರದಲ್ಲಿ ೮ಜನರಿಗೆ ಢೆಂಘಿಜ್ವರ ಕಾಣಿಸಿಕೊಂಡಿದ್ದು, ನಗರದ ಸರ್ಕಾರಿ ೧೦೦ ಹಾಸಿಗೆಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯದಲ್ಲಿಯೂ ಚೇತರಿಕೆ ಕಂಡುಬAದಿದೆ ಯಾವುದೇ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುವುದಿಲ್ಲವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ೧೦ನೇವಾರ್ಡ್ನಲ್ಲಿ ಆಯೇಷ ಸಿದ್ದಿಕಾ (೮) ಎನ್ನುವ ಬಾಲಕಿಗೆ ಢೆಂಘಿ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಇತ್ತೀಚೆಗೆ ಮರಣಹೊಂದಿದ್ದಳು.
ನಗರದಲ್ಲಿ ಢೆಂಘಿ ಮತ್ತು ವೈರಲ್ ಫೀವರ್ ಜ್ವರ ಹರಡಲು ಸ್ವಚ್ಛತೆ ಇಲ್ಲದೆ ಇರುವುದು ಮುಖ್ಯ ಕಾರಣವಾಗಿದೆ ನಮ್ಮ ಮನೆಯಲ್ಲಿರುವ ಇಬ್ಬರು ಮಕ್ಕಳಿಗೆ ಜ್ವರ ಬಂದಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕಸ ವಿಲೇವಾರಿ ಮಾಡಲು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ನಗರಸಭೆ ಅಧಿಕಾರಿಗಳಿಗೆ ಖುದ್ದಾಗಿ ಕಂಡು ಹೇಳಿ ಬಂದರೂ ೮ ದಿನಕ್ಕೊಮ್ಮೆ ನಮ್ಮ ವಾರ್ಡ್ನಲ್ಲಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ರೋಗಗಳ ಹರಡುತ್ತಿವೆ ಎಂದು ೧೦ನೇವಾರ್ಡ್ನ ನಿವಾಸಿ ಕಟುಗರ ಮಾಲಸಾಬ್ ತಿಳಿಸಿದ್ದಾರೆ.