ಮಾನ್ವಿ,: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಮುದುಡಬಾರದು ಪ್ರತಿಯೊಬ್ಬರು ಇಂತಹ ವೇದಿಕೆಯ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ರಾಜ್ಯ ಮಟ್ಟದ ಕ್ರೀಡೆಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ನೀವಾಗಬೇಕು ಎಂದು ಮಾನ್ವಿಯ ಸರ್ಕಾರಿ ಉರ್ದು ಪ್ರೌಢಶಾಲೆಯ ದೈಹಿಕ ಶಿಕ್ಷಕ ಶ್ರೀಧರಗೌಡ ಹೇಳಿದರು. ಮಾನ್ವಿ ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯಿಂದ ಎರಡು ದಿನಗಳವರೆಗೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಾನ್ವಿ ನಗರದ ಲೊಯೋಲ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಕಲೆ, ಸಾಂಸ್ಕೃತಿಕ ,ಕ್ರೀಡೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತನ್ನದೇ ಆದ ಕ್ರೀಡಾ ಪ್ರತಿಭೆ ಇರುತ್ತದೆ ಅಂತಹ ಪ್ರತಿಭೆಯನ್ನು ಲೋಕಾರ್ಪಣೆ ಮಾಡುವುದಕ್ಕೆ ಒಂದು ವೇದಿಕೆ ಮುಖ್ಯವಾಗಿರುತ್ತದೆ. ಹಾಗಾಗಿ ಯಾವ ವಿದ್ಯಾರ್ಥಿಯು ಕ್ರೀಡಾ ಪ್ರತಿಭೆಯಿಂದ ವಂಚಿತರಾಗಬಾರದು ಎಂಬ ಹಿತದೃಷ್ಟಿಯಿಂದ ಎರಡು ದಿನಗಳವರಗೆ ಕ್ರೀಡೆಗಳನ್ನು ಆಯೋಜಿಸಿರುವುದು ಉತ್ತಮವಾಗಿದೆ ಎಂದರು.
ವಿದ್ಯಾರ್ಥಿಗಳು ಶಿಸ್ತಿನಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಆಟ ಆಡಿದಾಗ ಮುಂದೊಂದು ದಿನ ಜಿಲ್ಲೆ ರಾಜ್ಯಮಟ್ಟದ ಕ್ರೀಡೆಗಳನ್ನು ಎದುರಿಸುವ ಶಕ್ತಿ ಬರುತ್ತದೆ ಹಾಗೂ ಕ್ರೀಡೆಯು ಮಾನಸಿಕ ಒತ್ತಡಗಳನ್ನು ನಿವಾರಿಸುತ್ತದೆ ಎಂದು ಶ್ರೀಧರಗೌಡ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲೊಯೋಲ ಸಂಸ್ಥೆಯ ಮುಖ್ಯಸ್ಥರಾದ ವಂ.ಫಾ.ಲಿಯೋ ಪಿರೇರಾ ಅವರು ಮಾತನಾಡಿ ಕಠಿಣ ಪರಿಶ್ರಮದಿಂದ ಶಿಸ್ತು ಬದ್ಧವಾಗಿ ಆಟವಾಡಿದಾಗ ಖಂಡಿತವಾಗಿ ಯಶಸ್ಸು ಸಿಗುತ್ತದೆ ಮತ್ತು ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಕ್ರೀಡೆ ಬಹಳಷ್ಟು ಮುಖ್ಯವಾದ ಪಾತ್ರ ವಹಿಸುತ್ತದೆ. ಕ್ರೀಡೆಯಿಂದ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದರು.
ಲೊಯೋಲ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕ ಸುರೇಶ ಅವರು ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದಿಸಿ ದೈನಂದಿನ ವಿದ್ಯಾಭ್ಯಾಸದ ಜೊತೆಗೆ 30 ನಿಮಿಷಗಳಾದರೂ ದೈಹಿಕ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದರು ಹಾಗೂ ಲೊಯೋಲ ಶಾಲೆಯ ಮಕ್ಕಳು ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯವೆಂದರು.
ನಂತರ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಚಿನ್ನದ ಪದಕ ದ್ವಿತೀಯ ಸ್ಥಾನ ಬೆಳ್ಳಿಯ ಪದಕ ಮತ್ತು ತೃತೀಯ ಸ್ಥಾನ ಕಂಚಿನ ಪದಕ ಹಾಕಿ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ವಂ.ಫಾ. ಸಿರಿಲ್ ರಾಜ್ , ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೂಲಿಯೇಟ್, ಸಹಾಯಕ ಮುಖ್ಯೋಪಾಧ್ಯಾಯರಾದ ಡೇವಿಡಕುಮಾರ್, ಕಾರ್ಯಕ್ರಮದ ಸಂಯೋಜಕ ಶಿಕ್ಷಕಿಯರಾದ ಗೌಸಿಯಾ, ಕು.ಜೇಶ್ಮಾ, ದೈಹಿಕ ಶಿಕ್ಷಣ ಶಿಕ್ಷಕ ಲತೀಫ್ ಸಾಬ್ ಬೋಧಕ ಬೋಧಕೇತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.