ಸಿರುಗುಪ್ಪ.ಜು.೦೪:- ತಾಲೂಕಿನ ತೆಕ್ಕಲಕೋಟೆಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್ ಎಫ್ ಸಿ ಅನುದಾನ ರೂ.೩ ಕೋಟಿ ಹಂಚಿಕೆ ಕುರಿತ ಕ್ರಿಯಾ ಯೋಜನೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ.ಪಂ. ಆಡಳಿತಾಧಿಕಾರಿಯಾದ ತಹಶೀಲ್ದಾರ್ ಎಚ್ ವಿಶ್ವನಾಥ ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ತಹಶೀಲ್ದಾರರು ಪಟ್ಟಣದ ೨೦ ವಾರ್ಡ್ಗಳನ್ನು ಪರಿಶೀಲಿಸಲಾಗಿದ್ದು, ಕೆಲವು ವಾರ್ಡ್ಗಳಲ್ಲಿ ಅನಗತ್ಯ ಕಾಮಗಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ ೧೪, ೧೭ ಮತ್ತು ೧೮ನೇ ವಾರ್ಡ್ನ ಕಾಮಗಾರಿ ಬದಲಾಯಿಸಿದ್ದು ಈ ಕಾಮಗಾರಿಗಳ ಅನುದಾನವನ್ನು ನೀಲಕಂಠೇಶ್ವರ ದೇವಸ್ಥಾನದ ಬಳಿಯ ಹಳ್ಳದ ಕಾಮಗಾರಿಗೆ ಹೊಂದಿಸಲಾಗಿದೆ. ವಾರ್ಡ್ಗಳಿಗೆ ಎಸ್ ಎಫ್ ಸಿ ಅನುದಾನ ರೂ೩ ಕೋಟಿ ಹಂಚಿಕೆ ನ್ಯಾಯಸಮ್ಮತವಾಗಿ ಮಾಡಲಾಗಿದ್ದು ಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪರಶುರಾಮ, ಕಿರಿಯ ಇಂಜನಿಯರ್ ಸುನಂದ, ಕಂದಾಯ ಅಧಿಕಾರಿ ಸುರೇಶ್ ಬಾಬು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.