ರಾಯಚೂರು,ಆ.31: ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು, ಪ್ರಶ್ನೆಗಳೇ ತದ್ವಿರುದ್ಧ ಮರು ಪರೀಕ್ಷೆ ನಡೆಸಬೇಕೆಂದು ಅಖಿಲಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಹಾಗೂ ಅಖಿಲಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ, ಕರ್ನಾಟಕ ಲೋಕ ಸೇವಾ ಆಯೋಗವು ೩೮೪ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಮಂಗಳವಾರ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಆಗಿರುವ ಎಡವಟ್ಟುಗಳು ಬಯಲಾಗಿವೆ.ಎರಡೂ ಪ್ರಶ್ನೆ ಪತ್ರಿಕೆಗಳಲ್ಲೂ ಹಲವಾರು ತಪ್ಪುಗಳು ನುಸುಳಿದ್ದು, ಕೆಲವು ಪ್ರಶ್ನೆಗಳು ಮತ್ತು ಉತ್ತರದ ಆಯ್ಕೆಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ತದ್ವಿರುದ್ದವಾಗಿವೆ. ಇನ್ನೂ ಕೆಲವು ಪ್ರಶ್ನೆಗಳು, ಉತ್ತರದ ಆಯ್ಕೆಗಳು ಅರ್ಥವೇ ಆಗದಂತಿವೆ.
ಉದಾಹರಣೆಗೆ, ಇಂಗ್ಲಿಷ್‌ನಲ್ಲಿ ತಪ್ಪು ಹೇಳಿಕೆಗಳು ಯಾವುವು ಎಂದು ಕೇಳಿದ್ದರೆ, ಕನ್ನಡದಲ್ಲಿ ಸರಿ ಹೇಳಿಕೆಗಳು ಯಾವುವು ಎಂದು ಕೇಳಲಾಗಿದೆ ಹಾಗೆಯೇ ಇಂಗ್ಲಿಷ್‌ನಲ್ಲಿ ಅತ್ಯಂತ ಭಾರದ ಪಕ್ಷಿಗಳಲ್ಲಿ ಒಂದು ಎಂದು ಹೇಳಿದ್ದರೆ, ಕನ್ನಡಕ್ಕೆ ಅನುವಾದ ಮಾಡುವಾಗ ವೇಗವಾಗಿ ಹಾರಾಡುವ ಪಕ್ಷಿ ಎಂದು ಉಲ್ಲೇಖಿಸಲಾಗಿದೆ.
ಹೀಗೆ ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲೀಷ್ ಅನುವಾದದ ಅರ್ಥಗಳನ್ನು ತದ್ವಿರುದ್ಧವಾಗಿ ಇರುವುದು ಬಹಳಷ್ಟು ಜನರನ್ನು ಅನುತ್ತೀರ್ಣ ಮಾಡುವ ಆತಂಕವಿರುವುದರಿ0ದ ಮಾನ್ಯ ಮುಖ್ಯಮಂತ್ರಿಗಳು ಕೆಪಿಎಸ್ ಸಿ ಪರಿಕ್ಷೆಗಳನ್ನು ಮರು ಪರಿಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಕ್ತವಾದ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಐಆರ್‌ಎಸ್‌ಓ ರಾಜ್ಯ ಅಜೀಜ್ ಜಾಗೀರ್ದಾರ್, ನಿರಂಜನ್ ಕುಮಾರ್, ಆರ್. ಹುಚ್ಚ ರೆಡ್ಡಿ,ರವಿಚಂದ್ರನ್,ಮಾರೆಪ್ಪ ಹರವಿ,ಸೈಯದ್ ಅಬ್ಬಾಸ್ ಅಲಿ,ಪ್ರಕಾಶ್ ಉಪಸ್ಥಿತರಿದ್ದರು.
 
					 
			 
                     
                     
                     
                    
 
    