ರಾಯಚೂರು: ಬೀದಿ ನಾಯಿಗಳ ದಾಳಿಯಿಂದ ಅಕಾಲಿಕ ಮರಣ ಹೊಂದಿದ ಮಹಾದೇವಿ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಬೀದಿ ನಾಯಿ ಹಾಗೂ ಬಿಡಾಡಿ ದನಗಳಿಂದ ಜನರ ಪ್ರಾಣ ರಕ್ಷಿಸಬೇಕೆಂದು ಒತ್ತಾಯಿಸಿ ಸಿಪಿಐಎಂನಿAದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟಿಪ್ಪುಸುಲ್ತಾನ್ ಗಾರ್ಡನ್ ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಯಚೂರು ನಗರದ ವಾರ್ಡ ನಂ. 23 ಮಡ್ಡಿಪೇಟೆ ಬಡವಾಣೆಯ ಕುಮಾರಿ ಮಹಾದೇವಿ ತಂದೆ ಮುನಿಯಪ್ಪ (ವ.23) ಇವರು ಡಿ.7ರಂದು ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಕೋಮಾಗೆ ಜಾರಿದ್ದರು. ರಾಯಚೂರಿನ ವಿವಿಧ ಆಸ್ಪತ್ರೆ ಹಾಗೂ ಬಳ್ಳಾರಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಡಿ.11 ರಂದು ಮಧ್ಯಾಹ್ನ 3.30 ರ ಸಮಯಕ್ಕೆ ಮರಣ ಹೊಂದಿರುತ್ತಾರೆ. ಈ ಸಾವಿಗೆ ನಗರಸಭೆ , ಜಿಲ್ಲಾಡಾಳಿತ ನೇರ ಹೊಣೆಗಾರವಾಗಿರುತ್ತದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ರಾಯಚೂರು ನಗರದಲ್ಲಿ ಕೆಲವು ದಿನಗಳ ಹಿಂದೆ ಬೀದಿ ನಾಯಿಗಳ ಕಾಟದಿಂದ ಕೊಳಗೇರಿ ಬಡಾವಣೆಗಳಾದ ಮಡ್ಡಿಪೇಟೆ, ಎಲ್.ಬಿ.ಎಸ್.ನಗರ, ಸಿಯಾತಲಾಬ್, ಹರಿಜನವಾಡ, ಜಲಾಲ ನಗರ, ಮೈಲಾರ ನಗರ, ಕಾಳಿದಾಸ ನಗರ , ಜಹೀರಾಬಾದ್, ಸ್ಟೇಷನ್ ಏರಿಯಾ, ಕೇಂದ್ರ ಬಸ್ ನಿಲ್ದಾಣ, ರೇಲ್ವೆ ಸ್ಟೇಷನ್ ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕರು, ಬಡಾವಣೆಗಳಲ್ಲಿ ಆಟ ಆಡುವ ಮಕ್ಕಳು, ರಸ್ತೆಗಳಲ್ಲಿ ಸಂಚರಿಸುವ ದ್ವಿ-ಚಕ್ರ ವಾಹನ ಸವಾರರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ಉದಾಹರಣೆಗಳು ಇವೆ.
ಇದಲ್ಲದೇ ರಾಯಚೂರು ತಾಲೂಕಿನ ಕಟ್ಲಟಕೂರು ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಓರ್ವ ಬಾಲಕಿ ಮೃತಪಟ್ಟಿರುವುದು ಪತ್ರಿಕೆಯಲ್ಲಿ ವರದಿಯಾಗಿರುವ ಉದಾಹರಣೆ ಇದೆ. ಅನೇಕ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ತಡರಾತ್ರಿವರೆಗೆ ರಸ್ತೆಗಳ ಮಧ್ಯ ನಾಯಿಗಳು ಮಲಗಿಕೊಂಡಿರುತ್ತವೆ. ವಾಹನಗಳಲ್ಲಿ ತಿರುಗಾಡುವ ಸವಾರರ ಮೇಲೆ ನಾಯಿಗಳು ಏಕಾಏಕಿ ದಾಳಿ ಮಾಡುತ್ತವೆ ಅಲ್ಲದೇ ಪ್ರಮುಖ ರಸ್ತೆಗಳಾದ ನಗರದ ಜೈನ್ ರಸ್ತೆ, ಬಸವನ ಬಾವಿ ಸರ್ಕಲ್, ಪೂರ್ಣಿಮಾ ಚಿತ್ರಮಂದಿರದ ಮುಂದೆ, ಗೋಶಾಲಾ ರಸ್ತೆ, ಸಿ.ಟಿ. ಟಾಕೀಜ್, ಪಟೇಲ್ ರಸ್ತೆ, ಹನುಮಾನ್ ಟಾಕೀಸ್, ಜಹೀರಾಬಾದ್, ಗಂಜ್ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ ಇದರಿಂದಾಗಿ ಸಾರ್ವಜನಿಕರ ಒಡಾಟಕ್ಕೆ ತುಂಬಾ ಸಮಸ್ಸೆಯಾಗಿದೆ. ಕೆಲವು ಬಾರಿ ಬಿಡಾಡಿ ದನಗಳಿಂದ ರಸ್ತೆಯ ಮೇಲೆ ಅಪಘಾತಗಳು ಸಂಭವಿಸಿವೆ. ಶಾಲಾ ಮಕ್ಕಳು ಶಾಲೆಗೆ ಹೋಗಿ ಬರುವ ಸಮಯದಲ್ಲಿಯೂ ಬೀದಿ ನಾಯಿಗಳು ಮತ್ತು ಬಿಡಾಡಿ ದನಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಾರಣ ಈಗಲಾದರೂ ನಗರ ಸಭೆ ರಾಯಚೂರು ನಗರದ ಎಲ್ಲಾ ಬಡಾವಣೆಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಜನ ಇಲ್ಲದಂತಹ ಪ್ರದೇಶದಲ್ಲಿ ಸ್ಥಳಾಂತರ ಮಾಡಿ ನಾಯಿಗಳ ಸಂತತಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು. ಈ ಕ್ರಮವು ಇಂತಹ ಘಟನೆಗಳು ನಡೆದಾಗ ಮಾತ್ರ ಒಂದೆರಡು ದಿನ ಮಾಡುವುದಕ್ಕೆ ಸೀಮಿತವಾಗದೆ ನಿರಂತರವಾಗಿ ಮಾಡಿದಾಗ ಮಾತ್ರ ಜನರ ಜೀವ ರಕ್ಷಣೆ ರಕ್ಷಿಸಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ರಸ್ತೆ ಮೇಲೆ ಬೀಡಾದಿ ದನಗಳನ್ನು ರಸ್ತೆಗಳ ಮೇಲೆ ಬಿಡದೇ ಅವುಗಳನ್ನು ಗೋಶಾಲಾಕ್ಕೆ ಸ್ಥಳಾಂತರಿಸಿ ರಸ್ತೆಯ ಮೇಲೆ ಬಿಡಾಡಿ ದನಗಳು ಬಿಡದೇ ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಮೃತ ಬಡ ಮಹಿಳೆ ಮಹಾದೇವಿ ಕುಟುಂಬಕ್ಕೆ ಸುಮಾರು ರೂ. ೩೦ಲಕ್ಷ ರೂಪಾಯಿ ಪರಿಹಾರ ಧನವನ್ನು ನಗರ ಸಭೆ ಮತ್ತು ಜಿಲ್ಲಾಡಳಿತದಿಂದ ನೀಡಬೇಕು ಎಂದು ಭಾರತ ಕಮ್ಯೂನಿಷ್ಟ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ ಪ್ರತಿಭಟನೆಯ ಧರಣಿ ಮೂಲಕ ಒತ್ತಾಯಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.
ಈ ಪ್ರತಿಭಟನೆಯಲ್ಲಿ ಹೆಚ್.ಪದ್ಮಾ, ಕರಿಯಪ್ಪ ಅಚ್ಚೋಳಿ, ಇಂದಿರಾ, ನಾಗರಾಜ, ಹನ್ಮಂತು, ಶಿವಣ್ಣ, ಶ್ರೀನಿವಾಸ, ರಾಜು, ಲಕ್ಷ್ಮಣ, ರೇಣುಕಾಮ್ಮ, ಶರಣಮ್ಮ, ಅನಿಲ್, ಗಗನ್, ಬುಜಪ್ಪ, ಡಿ.ಎಸ್.ಶರಣಬಸವ, ಗೋಕಾರಮ್ಮ, ಸೇರಿದಂತೆ ಮಡ್ಡಿಪೇಟೆ ನಿವಾಸಿಗಳು ಭಾಗವಹಿಸಿದ್ದರು.