ರಾಯಚೂರು,ಸೆ.11 :- ರಾಜ್ಯ ಸರ್ಕಾರವು ಇದೇ ಸೆ.15ರ ಪ್ರಜಾಪ್ರಭುತ್ವ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು, ಇದರ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತ್ತಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಭಾಗವಹಿಸಿ ಸಂಭ್ರಮದಿ0ದ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಅವರು ಕರೆ ನೀಡಿದರು.
ಅವರು ಸೆ.11ರ ಬುಧವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ರಾಜ್ಯದಲ್ಲಿ ಬೀದರದಿಂದ ಚಾಮರಾಜನಗರದವರೆಗೆ ಏಕಕಾಲಕ್ಕೆ ರಾಜ್ಯದ ಎಲ್ಲ 31ಜಿಲ್ಲೆಗಳಲ್ಲಿ ಮಾನವ ಸರಪಳಿ ರೂಪಿಸುವ ಮೂಲಕ ಪ್ರಜಾಪ್ರಭುತ್ವದ ಏಕತೆ, ಸದೃಡತೆ, ಸಾಮರಸ್ಯ ಸಾರುವ ಸಂಕೇತವಾಗಿ ಮಾನವ ಸರಪಳಿ ರೂಪಿಸಲಾಗುತ್ತಿದೆ. ಜಿಲ್ಲೆಯ ಎಲ್ಲರೂ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದವರು ಕರೆ ನೀಡಿದರು.
ಜಿಲ್ಲೆಯಲ್ಲಿ 109ಕಿ.ಮೀ ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಜನಪ್ರತಿನಿದಿನಗಳು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳ ಸದಸ್ಯರು, ಪದಾಧಿಕಾರಿಗಳ ಸಹಕಾರದೊಂದಿಗೆ ಇಲಾಖೆಗಳ ಅಧಿಕಾರಿಗಳು ಸಮನ್ವಯ ಹೊಂದಿ ಕಾರ್ಯನಿರ್ವಹಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯನ್ನು ಯಶಸ್ವಿಗೊಳಿಸಲು ಜಿಲ್ಲೆಯ ಸಮಸ್ತ ನಾಗರೀಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ದೇವದುರ್ಗ ತಾಲೂಕಿನಿಂದ ಲಿಂಗಸೂಗೂರು ತಾಲೂಕಿನವರೆಗೆ ಮಾನವ ಸರಪಳಿ ರೂಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕುಗಳಲ್ಲಿ ಬರುವ ಗ್ರಾಮ ಪಂಚಾಯತಿಗಳ ಮೂಲಕ ಕರಪತ್ರವನ್ನು ಹಂಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯಕ್ರಮವು ರಾಜ್ಯದಲ್ಲಿ ಅತ್ಯಂತ ಯಶಸ್ವಿ ಕಾರ್ಯಕ್ರಮ ಮಾಡಲು ಎಲ್ಲರೂ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಮಾನವ ಸರಪಳಿ ಸಾಗುವ ಮಾರ್ಗ: ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ನಿಂದ ಕೊಪ್ಪರ, ಗುಂಡುಗುರ್ತಿ, ದೇವದುರ್ಗ, ಕರಿಗುಡ್ಡ, ಅಮರಾಪೂರ ಕ್ರಾಸ್, ಜಾಲಹಳ್ಳಿ, ಚಿಂಚೋಡಿ, ಬುಂಕಲದೊಡ್ಡಿ, ತಿಂಥಣಿ ಬ್ರಿಡ್ಜ್ ನಿಂದ ಲಿಂಗಸೂಗೂರು ತಾಲೂಕಿನ ಗುರುಗುಂಟಾ, ಲಿಂಗಸೂಗೂರು, ಈಚನಾಳ ತಾಂಡಾ, ಈಚನನಾಳ, ಸುಂಕನಾಳ ಮೂಲಕ ರೋಡಲಬಂಡಾದವರೆಗೂ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 16 ಗ್ರಾಮಗಳ ಮೂಲಕ ೧೦೯ಕಿ.ಮೀ ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾದ ಶಶಿಕಾಂತ್ ಶಿವಪುರೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಮುಖಂಡರು, ಸ್ವಾಮೀಜಿಗಳು ಸಭೆಯಲ್ಲಿ ಇದ್ದರು.