ಬೀದರ, : ಬೀದರ ಜಿಲ್ಲೆಯಾದ್ಯಂತ ಕುಡಿಯುವ ನೀರು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಾಧಾರ ಕಾರಂಜಾ ಜಲಾಶಯವಾಗಿದೆ ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಶನಿವಾರ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ ನಂತರ ಮಾತನಾಡಿದರು.
ಬಾಗಿನ ಅರ್ಪಣೆ ನಮ್ಮ ಪೂರ್ವಜರ ಕಾಲದಿಂದ ನಡೆದುಬಂದಿದೆ. ಅವರು ಜಲ ಸಂರಕ್ಷಣೆಗಾಗಿ ಕೆರೆ, ಕಟ್ಟೆಗಳನ್ನು ಕಟ್ಟುತ್ತಿದ್ದರು. ಬಾಗಿನ ಅರ್ಪಣೆ ಮಾಡುವದರಿಂದ ನೀರಿನಲ್ಲಿರುವ ಜಲಚರ ಪ್ರಾಣಿಗಳಿಗೆ ತಿನ್ನಲು ಆಹಾರ ಸಿಗುತ್ತದೆ. ನೀರು ಜೀವಜಲ ನೀರಿಲ್ಲದೆ ಏನಿಲ್ಲ. ನೀರಿಗಾಗಿ ಅನೇಕ ಯುದ್ದಗಳು ನಡೆದಿರುವುದು ಇತಿಹಾಸದಲ್ಲಿ ಕೇಳಿದ್ದೆವೆ ಮತ್ತು ಇಂದಿಗೂ ಅಂತರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನೀರಿಗಾಗಿ ಅನೇಕ ಹೋರಾಟಗಳು ನಡೆಯುತ್ತಿವೆ ಎಂದು ಹೇಳಿದರು.
ಬಾಗಿನ ಅರ್ಪಣೆ ವಿಶೇಷ ಕಾರ್ಯಕ್ರಮ ಇಂದು ಗಣೇಶ ಚತುರ್ಥಿದಿನ ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಗಣೇಶ ಉತ್ಸವದ ಹಾರ್ದಿಕ ಶುಭಾಶಯಗಳು. ಪಕೃತಿ. ಪರಿಸರ ಹಾಗೂ ಹವಾಮಾನ ಬದಲಾವಣೆಯಿಂದ ಪರಿಸರದಲ್ಲಿ ಏರು ಪೇರಾಗುತ್ತಿದ್ದು. ಒಂದು ತಿಂಗಳು ಬಿಳುವ ಮಳೆ ಒಂದೇ ದಿನದಲ್ಲಿ ಬಿಳುತ್ತಿದೆ. ಒಂದು ಕಡೆ ಅತಿವೃಷ್ಠ ಹಾಗೂ ಇನ್ನೊಂದು ಕಡೆ ಅನಾವೃಷ್ಠಿಯಾಗುತ್ತಿದೆ. ಕೆಲವೊಂದು ಕಡೆ ವಿವಿಧ ರೀತಿಯಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ಹೇಳಿದರು.
೧೯೬೯ – ೭೦ ರ ದಶಕದಲ್ಲಿ ಪ್ರಾರಂಭವಾದ ಕಾರಂಜಾ ಜಲಾಶಯ ಇದಕ್ಕಾಗಿ ನಮ್ಮ ತಂದೆಯವರು ಸೇರಿದಂತೆ ಅನೇಕ ಹಿರಿಯರು ಹೋರಾಟ ಮಾಡಿದ್ದಾರೆ. ೧೩೧ ಕಿ. ಮೀ. ಬಲದಂಡೆ ಹಾಗೂ ೩೧ ಕಿ.ಮೀ ಎಡದಂಡೆ ಕಾಲುವೆ ಮಾಡಿದ್ದಕ್ಕೆ ರೈತರ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರು ಬರುತ್ತಿದ್ದು ಇದರಿಂದ ರೈತರ ಆರ್ಥಿಕತೆಗೆ ಅನುಕೂಲವಾಗಿದೆ ಎಂದು ಹೇಳಿದರು.
ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ರೈತರ ಭೂಮಿ ಹೋಗಿವೆ. ಪ್ರತಿವರ್ಷ ಹಿನ್ನಿರಿನಿಂದ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗುತ್ತಿವೆ ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕಿದೆ. ಇನ್ನೊಂದು ಸಲ ಸರ್ವೆಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ರಾಜ್ಯದ ಒಣ ಹವೆ ಪ್ರದೇಶಗಳಲ್ಲಿ ಬೀದರ ಕಲಬುರಗಿ ಜಿಲ್ಲೆಗಳು ಬರುತ್ತವೆ. ಬರುವ ದಿನಗಳಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರದ ವತಿಯಿಂದ ಪೂರ್ತಿ ಮಾಡುತ್ತೆವೆ ಎಂದು ಹೇಳಿದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಮಾತನಾಡಿ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕನಸು ಬಹು ದಿನಗಳದಿತ್ತು ಅದನ್ನು ಈಶ್ವರ ಖಂಡ್ರೆ ಅವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದ್ದಾರೆ. ಕಾರಂಜಾ ಜಲಾಶಯದ ನೀರು ಹುಮನಾಬಾದ ಕ್ಷೇತ್ರದ ರೈತರ ಜಮೀನಿನಲ್ಲಿ ನಿಂತು. ಭಾಲ್ಕಿ ಕ್ಷೇತ್ರದಲ್ಲಿಯ ರೈತರ ಜಮೀನುಗಳಿಗೆ ಅನುಕೂಲವಾಗಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಿದೆ. ರೈತರ ಚೆನ್ನಾಗಿ ಬೆಳೆಗಳನ್ನು ಬೆಳೆದಾಗ ಮಾತ್ರ ಎಪಿಎಂಸಿ ಹಾಗೂ ಗಾಂಧಿಗAಜನಲ್ಲಿ ಹಣ ಇರುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್, ಹುಮನಾಬಾದ ಶಾಸಕ ಡಾ. ಸಿದ್ದಲಿಂಗಪ್ಪ ಎನ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ. ಮೂಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಬ್ಯಾಲಹಳ್ಳಿ. ಕೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ ಜಾಧವ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಕಲಬುರಗಿ ವಲಯ ಕ.ನೀ. ನಿ.ನಿ. ಮುಖ್ಯ ಅಭಿಯಂತರರಾದ ಸೂರ್ಯಕಾಂತ ಮಾಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕಾರಂಜಾ ಯೋಜನೆ ಕಾರ್ಯನಿರ್ವಾಹಕ ಇಂಜಿನೀಯರ ಅಬ್ದುಲ ಖುದ್ದುಸ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.