ಸಿರುಗುಪ್ಪ.ಫೆ.೨೯ :
ನಗರದ ೧೦೦ ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ೩ನೇ ಮೇಲ್ಮಹಡಿಯಲ್ಲಿ ಕಛೇರಿ ಸಮಯದ ವೇಳೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ೧೫ದಿನಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಕೆಲವು ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿಯೇ ಕರ್ತವ್ಯ ನಿರ್ವಹಿಸುವುದು ಬಿಟ್ಟು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಸುಮಾರು ೧೫ ದಿನಗಳ ಹಿಂದೆಯೇ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾದಿಕಾರಿಗಳ ಗಮನಕ್ಕೆ ಸಾರ್ವಜನಿಕರೊಬ್ಬರು ತಂದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದರಿಂದಾಗಿ ಇಲ್ಲಿನ ಕೆಲ ಸಿಬ್ಬಂದಿ ಆಸ್ಪತ್ರೆಯನ್ನು ಜೂಜಾಟದ ಅಡ್ಡೆಯನ್ನಾಗಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದಾರೆ.
ಆಸ್ಪತ್ರೆಯ ಮೂರನೇ ಮಹಡಿಯ ನಿರ್ಮಾಣಕಾರ್ಯ ಮುಗಿದಿದ್ದು, ಈ ಕಟ್ದಡವನ್ನು ಗುತ್ತಿಗೆದಾರರು ಇಲ್ಲಿಯವರೆಗೆ ಆಸ್ಪತ್ರೆಗೆ ಹಸ್ತಾಂತರ ಮಾಡಿಲ್ಲ, ಮೂರನೇ ಮಹಡಿಯಲ್ಲಿ ಏನು ನಡೆಯುತ್ತಿದೆ ಎನ್ನುವ ವಿಷಯ ಗೊತ್ತಿಲ್ಲ, ಜೂಜಾಟ ನಡೆಯುವ ಬಗ್ಗೆಯೂ ಮಾಹಿತಿ ಇಲ್ಲವೆಂದು ಹಾರಿಕೆ ಉತ್ತರವನ್ನು ಆಸ್ಪತ್ರೆಯ ಮುಖ್ಯ ಆಡಳಿತ ವೈಧ್ಯಾಧಿಕಾರಿ ನೀಡುತ್ತಿದ್ದು, ಈ ಪ್ರಕರಣವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಬಗ್ಗೆ ಪತ್ರಕರ್ತರು ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಗುರುನಾಥ ಅವರನ್ನು ಪ್ರಶ್ನೆ ಮಾಡಿದರೆ ಮೂರನೇ ಮಹಡಿಯನ್ನು ಕಟ್ಟಿರುವ ಗುತ್ತಿಗೆದಾರರು ಆ ಕಟ್ಟಡವನ್ನು ನಮಗೆ ಹಸ್ತಾಂತರ ಮಾಡಿಲ್ಲ, ಇದರಿಂದಾಗಿ ಮೂರನೆ ಮಹಡಿಯಲ್ಲಿ ನಮ್ಮ ಸಿಬ್ಬಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈಗ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಇಲ್ಲಿ ಯಾರೇ ಜೂಜಾಟದಲ್ಲಿ ತೊಡಗಿದ್ದರೂ ಅಂತವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮ ತೆಗೆದುಕೊಳ್ಳುವುದಾಗಿ ಟಿ.ಹೆಚ್.ಒ. ಡಾ.ಈರಣ್ಣ ತಿಳಿಸಿದ್ದಾರೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಸ್ಪೀಟ್ ಜೂಜಾಟ ನಡೆಯುವ ಬಗ್ಗೆ ಪತ್ರಕರ್ತರಿಂದ ಮಾಹಿತಿ ಬಂದಿದ್ದು, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಯನ್ನು ವಿಚಾರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದು ತಹಶೀಲ್ದಾರ್ ಶಂಶಾಲA ತಿಳಿಸಿದ್ದಾರೆ.