ಸಿರುಗುಪ್ಪ.ಸೆ.11:- ತಾಲೂಕಿನ ದರೂರು ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ಹೆಚ್.ದೇವರಾಜ ಬೆಂಗಳೂರು ವಿಶ್ವವಿದ್ಯಾಲಯದ ೫೯ನೇ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಎ.ಆರ್ಟ್ಸ್ (ನಾಟಕ ವಿಭಾಗ)ನಲ್ಲಿ ೪ ಚಿನ್ನದ ಪದಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ಈರಣ್ಣ ಕ್ಯಾಂಪ್ ನಿವಾಸಿಗಳಾದ ತಾಯಿ ರೇಣುಕಮ್ಮ ಸಿರಿಗೆರೆ ಕ್ರಾಸ್‌ನಲ್ಲಿ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾ ಹಾಗೂ ತಂದೆ ಶೇಖಣ್ಣ ಕುರಿ ಸಕಾಣಿಕೆಯಲ್ಲಿ ತೊಡಗಿಕೊಂಡು ತಮ್ಮ ಕಷ್ಟದ ಜೀವನದಲ್ಲಿಯೂ ತಮ್ಮ ಎಲ್ಲಾ ಐದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಾರ್ಥಕತೆ ಮೆರೆದಿದ್ದಾರೆ.
ಮಧ್ಯಮ ವರ್ಗದ ಈ ಬಡ ಕುಟುಂಬದ ದೇವರಾಜ.ಹೆಚ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಆರ್ಟ್ಸ್ (ನಾಟಕ ವಿಭಾಗ)ದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ಕಾಲೇಜಿಗೆ ಶುಲ್ಕ ಪಾವತಿಸಲು ಹಣವಿಲ್ಲದೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ, ಈ ವಿದ್ಯಾರ್ಥಿಯ ನಾಟಕ ಅಭಿನಯವನ್ನು ಗುರುತಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದ ಅಧ್ಯಾಪಕರೊಬ್ಬರು ನೀಡಿದ ಪ್ರೋತ್ಸಾಹದಿಂದ ಈ ವಿಧ್ಯಾರ್ಥಿಯು ಉತ್ತಮ ಸಾಧನೆ ಮಾಡಿದ್ದು, ನಾಲ್ಕು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಬಡತನವಿದ್ದರೂ ಓದಬೇಕೆಂಬ ಹಂಬಲವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾನೆ.
ಪ್ರೊ ಕೆ.ರಾಮಕೃಷ್ಣಯ್ಯ ನವರ ಗರಡಿಯಲ್ಲಿ ಎಲ್ಲಾ ಆಯಾಮಗಳಲ್ಲಿ ಕಲಿತು ಪ್ರಸ್ತುತ ಬೆಂಗಳೂರಿನ ಒಂದು ಖಾಸಗಿ ಶಾಲೆಯಲ್ಲಿ ರಂಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾನೆ.
ನನ್ನ ಮಗ ಉತ್ತಮ ಸಾಧನೆ ಮಾಡಿರುವುದು ನಮಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ವಿದ್ಯಾರ್ಥಿಯ ತಾಯಿ ರೇಣುಕಮ್ಮ ಸಂತಸ ಹಂಚಿಕೊAಡಿದ್ದಾರೆ.