ರಾಯಚೂರು,ಸೆ.30: ರಾಜ್ಯ ಸರ್ಕಾರ ತುಂಗಭದ್ರ ಎಡದಂಡೆ ಕಾಲುವೆ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಅ.4 ರಂದು ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟ ರಾಜ್ಯ ರೈತ ಸಂಘ,ಹಸಿರು ಸೇನೆ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳಾದಳ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರ ಎಡದಂಡ ಕಾಲುವೆ ಮತ್ತು ನಾರಾಯಣಪುರ ಬಲದಂಡೆ ಕಾಲುವೆಗಳ ಸಮಸ್ಯೆಗಳ ಕುರಿತು ಸರ್ಕಾರ,ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಗಳ ಗಮನಕ್ಕೂ ತರಲಾಗಿದೆ. ಮುಖ್ಯ ಮಂತ್ರಿಗಳು ಸೂಚನೆ ನೀಡಿ ತುಂಗಭದ್ರ ಎಡದಂಡ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸೂಚನೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಕೊನೆ ಭಾಗಕ್ಕೆ ನೀರು ತಲುಪಿಲ್ಲವೆಂದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತುಂಗಭಧ್ರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದಾಗ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ರೈತ ಮುಖಂಡರೊ0ದಿಗೆ ಸಭೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದರು.
ಎರಡು ತಿಂಗಳು ಕಳೆದರೂ ಕೊನೆ ಭಾಗಕ್ಕೆ ನೀರು ಬಂದಿಲ್ಲ, ಯಾವುದೇ ಸಭೆಯೂ ನಡೆದಿಲ್ಲ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಸ್ಪಂದಿಸುತ್ತಿಲ್ಲವೆ0ದು ದೂರಿದರು.
ನಾರಾಯಣಪೂರ ಬಲದಂಡೆ ಕಾಲುವೆ ಕಾಮಗಾರಿ ಆಧುನೀಕರಣ ಹೆಸರಿನಲ್ಲಿ ಅರೆಬರೆ ಮಾಡಿ ಗುತ್ತೇದಾರರು ಹಾಗೂ ಅಧಿಕಾರಿಗಳು ಹಣ ಲೂಟಿ ಮಾಡಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಸಂದರ್ಭದಲ್ಲಿ ನಾರಾಯಣಪೂರ ಬಲದಂಡ ಕಾಮಗಾರಿ ಕಳಪೆಯಾಗಿದ್ದು, ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ ಗುತ್ತದಾರರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದರೂ ಆದರೆ ಇನ್ನೂವರೆಗೂ ಯಾವುದೇ ಕ್ರಮವಾಗಿಲ್ಲವೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬೂದೆಯ್ಯ ಸ್ವಾಮಿ, ಹಾಜಿ ಮಸ್ತಾನ್, ಭೀಮಣ್ಣ ನಾಯಕ ಉಪಸ್ಥಿತರಿದ್ದರು.