ರಾಯಚೂರು,ಜೂ.19: ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಜೂ.21 ರಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಜೆಪಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ನಗರದ ಪತ್ರಿಕಾ
ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಪೆಟ್ರೋಲ್ ಮತ್ತು ಡಿಸೇಲ್‌ಗಳ ಮೇಲೆ ಅವೈಜ್ಞಾನಿಕವಾಗಿ ಮಾರಾಟ ತೆರಿಗೆ ವಿಧಿಸಿದ್ದು, ಇದು ಜನ ವಿರೋಧಿಯಾಗಿದ್ದು, ಇದನ್ನು ಖಂಡಿಸಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಗುವುದೆಂದರು.
ಪಟ್ರೋಲ್ ಪ್ರತಿ ಲೀಟರ್‌ಗೆ 3 ರೂ.ಹಾಗೂ ಡಿಸೇಲ್‌ಗೆ 3.50 ಪೈಸ್ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರ ಹಾಕಿದೆ ಎಂದು ಆರೋಪಿಸಿದರು. ಇಂಧನ ಬೆಲೆ ಏರಿಕೆ ಯಿಂದ ಎಲ್ಲ ದಿನಬಳಕೆ ವಸ್ತುಗಳ ಬೆಲೆಗಳು ಸಹ ಏರುತ್ತವೆ ಎಂದರು.
ಅಲ್ಲದೇ ರೈತರು ಬಳಸುವ ಬೀಜ, ಗೊಬ್ಬರವಲ್ಲದೇ ಮುದ್ರಾಂಕ ಶುಲ್ಕ ಹೆಚ್ಚಳವಾಗಿವೆ ಎಂದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿದ್ದರೆ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ನಡೆಯುವ ರಸ್ತೆ ತಡೆಯಲ್ಲಿ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಎನ್.ಶಂಕ್ರಪ್ಪ,ಕೆ.ಎ0.ಪಾಟೀಲ್, ರವೀಂದ್ರ ಜಲ್ದಾರ್,ಗಿರೀಶ್ ಕನಕವೀಡು, ಜಿ.ಶಂಕರರೆಡ್ಡಿ, ಮಲ್ಲಿಕಾರ್ಜುನ್ ಹಳ್ಳೂರು ಉಪಸ್ಥಿತರಿದ್ದರು.