ಸಿರುಗುಪ್ಪ.ಆ.೦೧:- ತುಂಗಭದ್ರ ಜಲಾಶಯದಿಂದ ೧ಲಕ್ಷ ೮೫ಸಾವಿರ ಕ್ಯುಸೆಕ್ ನೀರನ್ನು ತುಂಗಭದ್ರ ನದಿಗೆ ಹರಿಯಬಿಟ್ಟಿದ್ದು, ಪರಿಣಾಮ ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿರುವ ಜನರು ಸುರಕ್ಷಿತವಾಗಿ ಸ್ಥಳಾಂತರವಾಗಬೇಕೆAದು ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರ ತಿಳಿಸಿದರು.
ತಾಲೂಕಿನ ತುಂಗಭದ್ರ ನದಿ ದಂಡೆಯಲ್ಲಿರುವ ಬಾಗೇವಾಡಿ, ಹಚ್ಚೊಳ್ಳಿ, ಹೊನ್ನಾರಹಳ್ಳಿ ಗ್ರಾಮಗಳಿಗೆ ಬೇಟಿನೀಡಿ ಪರಿಶೀಲನೆ ನಡೆಸಿ ಸಿರುಗುಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಪ್ರವಾಹವನ್ನು ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಲಾಶಯದಿಂದ ತುಂಗಭದ್ರ ನದಿಗೆ ೨ ಲಕ್ಷ ಕ್ಯೂಸೆಕ್ ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿರುವ ಸಾರ್ವಜನಿಕರು ಜಾಗ್ರತೆಯಿಂದಿರಬೇಕು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಅಲ್ಲಿನ ಜನರನ್ನು ಬೇರೆಡೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು, ಅಗತ್ಯ ಬಿದ್ದರೆ ಈ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು.
ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನದಿಯಲ್ಲಿರುವ ಮೊಸಳೆಗಳು ಹೊಲಗದ್ದೆಗಳಿಗೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ಹೊಲಗದ್ದೆಗಳಿಗೆ ಪ್ರವಾಹ ಕಡಿಮೆಯಾಗುವವರೆಗೆ ತೆರಳಬಾರದು, ನದಿ ದಂಡೆಯಲ್ಲಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಈ ಸಮಯದಲ್ಲಿ ನದಿಗೆ ಯಾರು ಇಳಿಯಬಾರದೆಂದು ರೈತರಿಗೆ ಮನವಿ ಮಾಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೋಡಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ತಾಲೂಕಿನ ದೇಶನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್‌ಪಿ ವೆಂಕಟೇಶ, ತಹಶೀಲ್ದಾರ್ ಹೆಚ್.ವಿಶ್ವನಾಥ, ಸಿ.ಪಿ.ಐ. ಹನುಮಂತಪ್ಪ, ಕಂದಾಯ ಅಧಿಕಾರಿ ಮಂಜುನಾಥ, ಪಿ.ಡಿ.ಒ. ರಮೇಶ್‌ನಾಯ್ಕ ಇದ್ದರು.