ಹೊಸಪೇಟೆ (ವಿಜಯನಗರ) ಸೆಪ್ಟಂಬರ್ 10: ಅರ್ಹ ಕಡು ಬಡವರಿಗೆ ಸೂರು ಕಲ್ಪಿಸುವುದು ಪುಣ್ಯದ ಕಾರ್ಯವಾಗಿದ್ದು, ಕಟ್ಟಡ ನಿರ್ಮಾಣದ ವಿವಿಧ ಹಂತದಲ್ಲಿರುವ ಜಿಯೋಟ್ಯಾಗ್ ಮಾಡಲಾದ ೯೧೭ ಮನೆಗಳನ್ನು ಪೂರ್ಣಗೊಳಿಸಿ ಬರುವ ದೀಪಾವಳಿಗೆ ಫಲಾನುಭವಿಗಳಿಗೆ ನೀಡುವಂತೆ ಕ್ರಮ ವಹಿಸಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಈ ತುಕಾರಾಮ್ ಅವರು ಹೊಸಪೇಟೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಗಡುವು ವಿದಿಸಿದರು.
ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ ಸೆಪ್ಟೆಂಬರ್ ೧೦ರಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮನೆಗಳ ಪ್ರಗತಿಯನ್ನು ಪೂರ್ಣಗೊಳಿಸುವಲ್ಲಿ ಚುರುಕಾಗಿ ಕೆಲಸ ನಿರ್ವಹಿಸಬೇಕು. ವಿಜಯನಗರ ಜಿಲ್ಲೆಗೆ ಅನುಮೋದನೆಗೊಂಡ ೬೪೨೦ ಫಲಾನುಭವಿಗಳ ಪೈಕಿ ಬಾಕಿ ಉಳಿದ ೩೮೬ ಫಲಾನುಭವಿಗಳ ಆಧಾರ್ ಜೋಡಣೆಯನ್ನು ಪೂರ್ಣಗೊಳಿಸಬೇಕು. ಮನೆಗಳು ಪ್ರಾರಂಭವಾಗದೇ ಇದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮನೆ ಪ್ರಾರಂಭಿಸಲು ಕ್ರಮ ವಹಿಸಬೇಕು ಎಂದು ಸಂಸದರು ಸೂಚನೆ ನೀಡಿದರು.
ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪೂರೈಕೆಯಾಗಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಬೇಕು. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅವಶ್ಯವಿರುವ ನಿವೇಶನಗಳ ಬೇಡಿಕೆಯನ್ನು ತಾಲೂಕುವಾರು ಪಟ್ಟಿ ಮಾಡಿ ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿ ಸಮನ್ವಯ ಮಾಡಬೇಕು ಎಂದು ಸಂಸದರು ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸಂಸದರು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಸೂಚನೆ ನೀಡಿದರು.
ಡೈರಿ ನಿರ್ವಹಣೆಗೆ ಸೂಚನೆ: ಪ್ರತಿನಿತ್ಯ ದಿನಚರಿ ನಿರ್ವಹಣೆ ಮಾಡುತ್ತೀರಾ ಎಂದು ಸಂಸದರು ಅಧಿಕಾರಿಗಳಿಗೆ ಕೇಳಿದರು. ಇಲಾಖೆಗಳಿಂದ ಡೈರಿ ಒದಗಿಸಿಲ್ವಾ ಎಂದು ಪ್ರಶ್ನಿಸಿದರು. ಸಭೆಗೆ ಸರಿಯಾಗಿ ಮಾಹಿತಿ ನೀಡದ, ಪ್ರತಿ ನಿತ್ಯ ಡೈರಿ ಬಳಸದ ಅಧಿಕಾರಿಗಳ ನಿರ್ಲಕ್ಷö್ಯದ ಬಗ್ಗೆ ತಾವು ನೇರವಾಗಿ ಆಯಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ, ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಕೇಂದ್ರ ಪುರಷ್ಕೃತ ವಿವಿಧ ಯೋಜನೆಗಳ ಬಗ್ಗೆ ಈ ಹಿಂದೆ ನಡೆದ ಸಭೆಯ ಅನುಪಾಲನಾ ವರದಿಯ ಮೇಲೆ ಸಂಸದರು ಚರ್ಚಿಸಿದರು.
ಸಭೆಯಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಎನ್.ಟಿ.ಶ್ರೀನಿವಾಸ, ಎಲ್.ಕೃಷ್ಣ ನಾಯ್ಕ, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಷಾಹ, ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣಪ್ಪ, ಸಹಾಯಕ ಆಯುಕ್ತರಾದ ವಿವೇಕಾನಂದ ಪಿ., ಚಿದಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮ್ಪಪ ಲಾಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಇದ್ದರು.