ಮಾನ್ವಿ,: ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ೯.ಗಂ.ಸಮಯದಲ್ಲಿ ಕೆಎಸ್ಆರ್ ಟಿಸಿ ಬಸ್ ಹಾಗೂ ಲೊಯೊಲಾ ಶಾಲಾ ಬಸ್ ನಡುವೆ ನಡೆದ ಭೀಕರ ಅಪಘಾತದ ಘಟನೆ ಖಂಡಿಸಿ ಧೀಡಿರ್ ಆಗಿ ಕಪಗಲ್ ಕ್ರಾಸ್ ಬಳಿ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು. ಸಾರಿಗೆ ಬಸಗ ಮತ್ತು ಶಾಲಾ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಕೈ, ಕಾಲು ಛಿದ್ರಗೊಂಡಿವೆ. ೩೨ ವಿದ್ಯಾರ್ಥಿಗಳು, ಬಸನಲ್ಲಿದ್ದ ಅನೇಕ ಪ್ರಯಾಣಿಕರು ಗಾಯಗೊಂಡಿರುವುದಕ್ಜೆ ಹದಗೆಟ್ಟ ರಸ್ತೆ ಮತ್ತು ಲೋಕೋಪಯೋಗಿ ಇಲಾಖೆ, ಕೆಐಆರಡಿಎಲ್ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಮೃತ ವಿದ್ಯಾರ್ಥಿಗಳ, ಗಾಯಗೊಂಡಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷ ಜಾವಿದಖಾನ್ ಒತ್ತಾಯಿಸಿದರು.
ಮುತ್ತಿಗೆ ಎಚ್ಚರಿಕೆ: ಕಪಗಲ್ ಬಳಿ ನಡೆದ ರಸ್ತೆ ಅಪಘಾತಕ್ಕೆ ಲೊಯೊಲಾ ಶಾಲೆಯ ಆಡಳಿತ ಮಂಡಳಿ ನೇರ ಹೊಣೆಗಾರರಾಗಿದ್ದು ಒಂದು ವಾರದೊಳಗೆ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ೨೫ ಲಕ್ಷ, ಗಾಯಗೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ೧೫ ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಲೊಯೊಲಾ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ಕೆ.ನಿತೀಶ್ ಮಾತನಾಡಿ, ರಸ್ತೆ ಅಪಘಾತ ಸಂಭವಿಸಿದ ಸಂಪೂರ್ಣ ಮಾಹಿತಿ ಸಂಗ್ರಹಿಸಿ ರಸ್ತೆ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಹಾಗೂ ಸಣ್ಣ ಪುಟ್ಟ ಗಾಯಗೊಂಡಿರುವ ಕುಟುಂಬಕ್ಕೆ ಪರಿಹಾರ ನೀಡುವಂತಹ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.