ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ನೆರೆ ಸಂತ್ರಸ್ತರ ಪುನರ್ ವಸತಿ ಮನೆಗಳನ್ನು 2009 ರಲ್ಲಿ ಸರ್ವೆ ಮಾಡಿದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
28-09-2009 ರಿಂದ ದಿನಾಂಕ 02-10-2009 ರವರೆಗೆ ಬಿದ್ದ ಬಾರಿ ಮಳೆಯಿಂದ ಉಂಟಾದ ನೆರೆಹಾವಳಿಗೆ ಹೇರುಂಡಿ ಗ್ರಾಮಸ್ಥರು ಮನೆಗಳನ್ನು ಕಳೆದುಕೊಂಡಿದ್ದರೂ ಈ ವರೆಗೂ ಸಂತ್ರಸ್ತರಿಗೆ ಮನೆಗಳನ್ನು ವಿತರಿಸಿಲ್ಲ. ಫಲಾನುಭವಿಗಳನ್ನು ಗುರುತಿಸುವಲ್ಲಿ ನಿಯಮಾವಳಿಗಳನ್ನು ಪಾಲಿಸಿಲ್ಲ. ಆದರೆ ಈಗ ಹೊಸ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲು ಹೊರಟಿದ್ದಾರೆ. ಆದ್ದರಿಂದ ಮರಳಿ ಪರಿಶೀಲನೆ ಮಾಡಬೇಕು. ಒಟ್ಟು 159 ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದು ಆ ಪೈಕಿ 109 ಮನೆಗಳನ್ನು ನಿರ್ಮಾಣವಾಗಿರುತ್ತವೆ. ಆದ್ದರಿಂದ ಇನ್ನು 50 ಪ್ಲಾಟುಗಳು ಖಾಲಿ ಇದ್ದು ಅವುಗಳಲ್ಲಿ ಊರಿನ ಕಡುಬಡವರಿಗೆ ಅವರ ಪರಿಸ್ಥಿತಿಯನ್ನು ಅವಲೋಕನ ಮಾಡಿ, ನಿಜವಾದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಒಂದು ವೇಳೆ ಬೇಜವಾಬ್ದಾರಿ ತೋರಿದರೆ, ತಮ್ಮ ಕಾರ್ಯಾಲಯದ ಮುಂದೆ ಎಲ್ಲ ಫಲಾನುಭವಿಗಳನ್ನು ಕರೆದುಕೊಂಡು ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ಉಗ್ರವಾದ ಚಳುವಳಿ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಒತ್ತಾಯಿಸಿದರು.
ಹನುಮಂತಪ್ಪ ಮನ್ನಾಪೂರ, ಆಂಜನೇಯ ಟೊಣ್ಣೂರು,ಹೊನ್ನಪ್ಪ ಗುಂಡಗುರ್ತಿ, ಲಕ್ಷ್ಮಣ ಮಸರಕಲ್, ಯಲ್ಲಪ್ಪ, ನೀಲಕಂಠ, ಎಸ್. ನರಸಿಂಹಲು ಸೇರಿದಂತೆ ಇತರರು ಭಾಗವಹಿಸಿದ್ದರು.