ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ: ರಾಹುಲ್ ರತ್ನಂ ಪಾಂಡೇಯ

Eshanya Times

ಕೊಪ್ಪಳ, ನ ೧೩ : ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೇಯ ಹೇಳಿದರು.
ಅವರು ಬುಧವಾರದ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ನಡೆದ ಬೆಂಗಳೂರು ಬಾಲಭವನ ಸೊಸೈಟಿ, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮತನಾಡಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜೀವನದಲ್ಲಿ ಒಂದು ಭಾಗವಾಗಿರಬೇಕು. ಇದರಿಂದ ನಮಗೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಯೋಗ, ಕರಾಟೆ, ನೃತ್ಯ, ಹಾಡುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು, ಕಾದಂಬರಿ ಹಾಗೂ ವಿಶೇಷ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮಕ್ಕಳು ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಬೇಕು. ಈ ಹಿನ್ನೆಲೆಯಲ್ಲಿ ನಿಮ್ಮ ಮನೆ, ಶಾಲೆ ಹಾಗೂ ಸುತ್ತು ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾರೂ ಸಹ ಬಯಲು ಶೌಚಕ್ಕೆ ಹೋಗಬಾರದು. ಕಡ್ಡಾಯವಾಗಿ ಶೌಚಾಲಯವನ್ನೇ ಬಳಕೆ ಮಾಡಬೇಕು. ಈ ಬಗ್ಗೆ ನಿಮ್ಮ ಮನೆಯವರಿಗೆ ಮತ್ತು ನಿಮ್ಮ ಮನೆಯ ಸುತ್ತಮುತ್ತ ಇರುವ ಜನರಿಗೂ ಅರಿವು ಮೂಡಿಸಬೇಕು ಎಂದರು.
ಮಕ್ಕಳ ಸೃಜನಾತ್ಮಕತೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಪರಶುರಾಮ ವಾಯ್ ಶೆಟ್ಟೆಪ್ಪನವರ ಅವರು ಮಾತನಾಡಿ, ಬಾಲ ಭವನ ಸೊಸೈಟಿಯಿಂದ ನಡೆಯುವ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿವೆ. ಮಕ್ಕಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳ ದಿನಾಚರಣೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಶಸ್ತಿ ಪತ್ರಗಳನ್ನು ವಿತರಣೆ: ಸೃಜನಾತ್ಮಕ ಕಲೆ ಪ್ರದರ್ಶನದಲ್ಲಿ ವೈಷ್ಣವಿ ಕಮ್ಮಾರ ಪ್ರಥಮ ಸ್ಥಾನ, ತೇಜಸ್ವಿನಿ ದ್ವಿತೀಯ ಹಾಗೂ ಪುಟ್ಟರಾಜ ವೈ ನಿಡೋಣಿ ತೃತೀಯ ಸ್ಥಾನ. ಚಿತ್ರಕಲೆ ವಿಭಾಗದಲ್ಲಿ ವಿದ್ಯಾರ್ಥಿ ಪುಟ್ಟರಾಜ ಗಂಗಾಧರ ಪ್ರಥಮ ಸ್ಥಾನ, ಚೇತನ ಚಿತ್ರಗಾರ ದ್ವಿತೀಯ ಹಾಗೂ ಶ್ರೀನಿವಾಸ ಬಸವಂತಪ್ಪ ತೃತೀಯ ಸ್ಥಾನ. ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಸ್ಪರ್ಧೆಯಲ್ಲಿ ಪ್ರದೀಪ್ ನಡೂಲರ ಪ್ರಥಮ ಸ್ಥಾನ, ಬಂಗಾರಿ ದ್ವಿತೀಯ ಸ್ಥಾನ ಹಾಗೂ ಅಭಿಷೇಕ ತೃತೀಯ ಸ್ಥಾನ. ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಸಮರ್ಥ ಎಸ್.ಎಂ ಪ್ರಥಮ ಸ್ಥಾನ, ಕೃಷ್ಣಚೈತನ್ಯ ದೇಸಾಯಿ ದ್ವಿತೀಯ ಹಾಗೂ ತರುಣಾ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತರಾದ ಮಕ್ಕಳಿಗೆ ಜಿ.ಪಂ ಸಿಇಓ ಅವರು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ ಕಾರ್ಯಕ್ರಮದ ನಿರೂಪಿಸಿದರು. ಕೊಪ್ಪಳ ಸಿಡಿಪಿಓ ಅವರು ಸ್ವಾಗತಿಸಿದರೆ, ಜಿಲ್ಲಾ ಬಾಲ ಭವನದ ಕಾರ್ಯಕ್ರಮ ಸಂಯೋಜಕ ಮೆಹಬೂಬಸಾಬ ಇಲಾಹಿ ವಂದನಾರ್ಪಣೆ ಮಾಡಿದರು. ತೀರ್ಪುಗಾರರು, ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಪಾಲಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";