ಸಿರುಗುಪ್ಪ.ಅ.25: ಮನುಷ್ಯ ಹುಟ್ಟಿದಾಗಲೇ ಅವನೊಂದಿಗೆ ಕಲೆಗಳು ಸಹ ಹುಟ್ಟಿಕೊಂಡವು. ಮೊದ ಮೊದಲು ಆ ಕಲೆಗಳು ಮನುಷ್ಯನ ಭಾವನೆಗಳನ್ನು, ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಲು ಸಹಕಾರಿಯಾಗಿದ್ದವು. ಕ್ರಮೇಣ ಅವುಗಳು ಅವನ ಒಂದ್ಹೊತ್ತಿನ ಊಟಕ್ಕಾಗಿ ಕಸುಬುಗಳಾಗಿ ಮಾರ್ಪಾಡಾಗಿದ್ದಲ್ಲದೇ ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಬೆಳೆದು ಬಂದವು ಎಂದು ತೊಗಲುಗೊಂಬೆ ಕಲಾವಿದ ಹೊನ್ನೂರುಸ್ವಾಮಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಬೀರಹಳ್ಳಿ ಗ್ರಾಮದ ಅಂಬಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಭೈರಗಾಮದಿನ್ನಿಯ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ), ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಂಗ ಸುಗ್ಗಿ -2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮೂಹ ಮಾಧ್ಯಮಗಳ ಭರಾಟೆಯಿಂದಾಗಿ ನಾಡಿನ ಅಸ್ಮಿತೆಯಾಗಿದ್ದ ಅನೇಕ ಜಾನಪದ ಕಲೆಗಳು ಇಂದು ಅವಸಾನದ ಅಂಚಿಗೆ ಸರಿದಿವೆ, ಹಿಂದೆ ಹಳ್ಳಿಗಳಲ್ಲಿ ಬಯಲಾಟ, ತೊಗಲಗೊಂಬೆಯಾಟ ಆಡಿಸಿದರೆ ಭವಣೆಗಳು ದೂರವಾಗಿ, ಸಮೃದ್ಧಿ ಸಂಪತ್ತು ಆ ನಾಡಿಗೆ ದೊರೆಯುತ್ತದೆ ಎಂಬ ಅಚಲವಾದ ನಂಬಿಕೆ ನಮ್ಮ ಜನಪದರಲ್ಲಿ ಇತ್ತು. ಆ ನಿಟ್ಟಿನಲ್ಲಾದರೂ ಕಲೆಗಳು ಉಳಿದುಕೊಂಡಿದ್ದವು.
ಮನುಷ್ಯನ ವಿವೇಚನೆ ಶಕ್ತಿ ಬೆಳೆದಂತೆಲ್ಲ ನಂಬಿಕೆಗಳಿಗೆ ಮೌಢ್ಯತೆಯ ಬಣ್ಣ ತುಂಬಿ ಅಲ್ಲಗಳಿಯುತ್ತಲೆ ಸಾಗಿದ. ಈ ಪ್ರಕ್ರಿಯೆ ಹೀಗೆ ಮುಂದುವರೆದರೆ, ಮುಂದಿನ ಪೀಳಿಗೆಗೆ ಮೂಲ ಕಲೆಗಳ ಚಿತ್ರಣ ಕಲ್ಪನೆಗೂ ಸಿಗದಂತಾಗುವುದು. ನಾಡಿನ ಅನೇಕ ಕಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಹೇಳಿದರು.
ಗುಬ್ಬಿಹಾಳ್ ಜೆ.ದೊಡ್ಡ ರಂಗಸ್ವಾಮಿ ಹಾಗೂ ದೊಡ್ಡ ರಂಗಣ್ಣನವರ ತಂಡದಿAದ ಸುಗಮ ಸಂಗೀತ ಹೊನ್ನುರುಸ್ವಾಮಿ ಮತ್ತು ತಂಡದಿ0ದ ದಶಕಂಠ ರಾವಣ ಶಿವನ ಆತ್ಮ ಲಿಂಗ ತೊಗಲುಗೊಂಬೆಯಾಟ ನಡೆಯಿತು.
ಶಿವಶಂಕರ್ ನಾಯ್ಡು ರಚಿಸಿದ ಮತ್ತು ಆರ್.ಪಿ.ಈಶಪ್ಪ ನಿರ್ದೇಶನದ ದ್ರೌಪದಿ ವಸ್ತ್ರಾಪಹರಣ ಹಾಸ್ಯ ಪೌರಾಣಿಕ ನಾಟಕವನ್ನು ನಾಗರಾಜ್ ಮತ್ತು ತಂಡದವರು ಪ್ರಸ್ತುತಿ ಪಡಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಗ್ರಾ.ಪಂ. ಅಧ್ಯಕ್ಷ ಮಲ್ಲಾರೆಡ್ಡಿ, ಅಂಬಾದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ, ರಂಗ ಕಲಾವಿದ ಡಾ.ಅಂಬರೀಶ್, ಮುಖಂಡರಾದ ಮೋಹನ್ ರೆಡ್ಡಿ, ಸೋಮಶೇಖರ್ ರೆಡ್ಡಿ ಹಾಗೂ ಸದಸ್ಯ ಡಿ.ಎಂ.ಯಲ್ಲಪ್ಪ, ಸಿದ್ದಲಿಂಗ, ಶಿಕ್ಷಕ ಶಾಷು, ಆರ್.ಭೀಮನಗೌಡ, ವೀರೇಶ್ ಇನ್ನಿತರರು ಇದ್ದರು.