ಬಳ್ಳಾರಿ,ಸೆ.27:
ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಮೊದಲ ಬಾರಿಗೆ ಗ್ರಾಮದ ಶಿವಶರಣೆ ಹಂಪಮ್ಮನವರ ಮಠದಲ್ಲಿ ಪುಸ್ತಕದ ಗೂಡನ್ನು ಶುಕ್ರವಾರ ಉದ್ಘಾಟನೆ ಮಾಡಲಾಯಿತು.
ಬಾದನಹಟ್ಟಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಕರಿಯಪ್ಪ ಅವರು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳು ಜ್ಞಾನ ಪಡೆಯಲು, ಹಲವು ಸರ್ಕಾರಿ ಹುದ್ದೆಗೆ ಓದುವವರಿಗೆ ಈ ಪುಸ್ತಕ ಗೂಡು ಸಹಕಾರಿಯಾಗಲಿದೆ ಎಂದರು.
ಕುರುಗೋಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲಾ ಅವರು ಮಾತನಾಡಿ, ಪುಸ್ತಕ ಗೂಡು ಗ್ರಾಮೀಣ ಭಾಗದ ಮಕ್ಕಳಲ್ಲಿ ಅಕ್ಷರ ಜ್ಞಾನ, ಪುಸ್ತಕ ಪ್ರೀತಿ ಮೂಡಿಬರಲಿ, ಇದರ ಸದುಪಯೋಗ ಜನರು ಉಪಯೋಗಿಸಿಕೊಳ್ಳಬೇಕು ಎಂದರು.
ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ ಅವರು ಮಾತನಾಡಿ, ೩೭೧-ಜೆ ಹೈದರಾಬಾದ್ ವಿಶೇಷ ಪ್ರಾತಿನಿಧ್ಯ ವತಿಯಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇವುಗಳನ್ನು ಬಳಸಿಕೊಳ್ಳಬೇಕು, ಗ್ರಾಮದ ಜನರು ಈ ಪುಸ್ತಕ ಗೂಡನ್ನು ಸಮರ್ಪಕವಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.
ಪುಸ್ತಕ ಗೂಡುಗಳನ್ನು ಪ್ರಸ್ತುತ ಬಸ್ ನಿಲ್ದಾಣಗಳಲ್ಲಿ, ಉದ್ಯಾನವನಗಳಲ್ಲಿ ಸಾರ್ವಜನಿಕ ಕಚೇರಿಗಳಲ್ಲಿ, ಮಠ, ಮಂದಿರಗಳಲ್ಲಿ ಸಾರ್ವಜನಿಕರು ತಮ್ಮ ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಲಿ ಎಂಬ ಉದ್ದೇಶದಿಂದ ಈ ಪುಸ್ತಕ ಗೂಡನ್ನು ನಿರ್ಮಿಸಲಾಗಿದೆ.
ಈ ವಿನೂತನ ವಿಧಾನದಿಂದ ಸಮುದಾಯದಲ್ಲಿ ಓದುವ ಪ್ರಜ್ಞೆ ಮೂಡಿಸುವಲ್ಲಿ ಪುಸ್ತಕ ಗೂಡು ಪ್ರಭಾವ ಬೀರಲಿ ಎಂಬುದು ಇದರ ಅಶಯವಾಗಿದೆ. ಇಲ್ಲಿ ಕಥೆ, ಕಾದಂಬರಿ, ನಿಯತಕಾಲಿಕೆಗಳು ಮತ್ತು ನಿತ್ಯ ಸುದ್ದಿ ಪತ್ರಿಕೆಗಳ ಪೂರೈಕೆಯಿದ್ದು. ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸ ಸಮುದಾಯದಲ್ಲಿ ಹೆಚ್ಚು ಮೂಡಲಿ.
– ಡಾ.ಪೂಜಾರಿ ಯಲ್ಲೇಶ, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಫೆಲೋ, ಕುರುಗೋಡು ತಾಪಂ, ಬಳ್ಳಾರಿ.
ಕಾರ್ಯಕ್ರಮದಲ್ಲಿ ಬಾದನಹಟ್ಟಿ ಗ್ರಾಪಂ ಉಪಾಧ್ಯಕ್ಷರಾದ ಮೇಟಿ ಕರಿಬಸಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಲಿ, ಗ್ರಂಥಪಾಲಕ ಹಾಗಲೂರಪ್ಪ, ಶರಣಬಸಪ್ಪ, ದುರ್ಗ ಹಾಗಲುರಪ್ಪ, ಜಿ.ದೇವರಾಜ್ ಸೇರಿದಂತೆ ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.