ರಾಯಚೂರು,ಜು.9: ಲಿಂಗಸಗೂರು ತಾಲೂಕಿನ ಅನ್ವರಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೇವಲ ಎರಡು ವರ್ಷ ಹಳೆಯ ಶಾಲಾ ಕೊಠಡಿ ಕುಸಿದು ಬಿದ್ದು ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಎಐಡಿಎಸ್‌ಓ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಇದಕ್ಕೂ ಹಿಂದೆ ರಾಯಚೂರಿನ ಅರಸೀಗೇರ ಶಾಲೆಯ ಚಾವಣಿ ಕುಸಿದು ಬಿದ್ದು ಮಕ್ಕಳು ಗಾಯಗೊಂಡಿದ್ದರು ಮತ್ತು ದೇವದುರ್ಗ ಪಟ್ಟಣದ ಸರಕಾರಿ ಬಾಲಕಿಯರ ಶಾಲೆಯ ಚಾವಣಿ ಕುಸಿದು ವಿದ್ಯಾರ್ಥಿನಿಯ ಕಾಲಿಗೆ ತೀವ್ರ ಪೆಟ್ಟಾಗಿತ್ತು.
ದಿನೇ ದಿನೇ ಸರಕಾರಿ ಶಾಲಾ ಮತ್ತು ಕಾಲೇಜುಗಳ ಚಾವಣಿಗಳು / ಕೊಠಡಿಗಳು ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಈ ರೀತಿಯ ದುರ್ಘಟನೆಗಳು ಮತ್ತೆ ಪುನರಾವರ್ತಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮತ್ತು ಇಂಥಹ ಘಟನೆಗಳಲ್ಲಿ ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಿ ಉಗ್ರವಾದ ಕಠಿಣ ಶಿಕ್ಷೆಯನ್ನು ವಿಧಿಸಬೇಕು, ಮತ್ತು ಶಿಥಿಲಗೊಂಡಿರುವ ಕಟ್ಟಡಗಳನ್ನು ವಿಳಂಬ ಮಾಡದೆ ಈ ಕೂಡಲೇ ದುರಸ್ತಿಪಡಿಸಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕೆಂದು ಎಐಡಿಎಸ್‌ಓ ರಾಯಚೂರು ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ಬೇಡಿಕೆ : ಜಿಲ್ಲೆಯಾದ್ಯಂತ ಶಿಥಿಲಗೊಂಡಿರುವ ಗೊಂಡಿರುವ ಕೊಠಡಿಗಳ ಪಟ್ಟಿ ಮಾಡಿ ವಿಳಂಬ ಮಾಡದೆ ದುರಸ್ತಿಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು. ಈ ರೀತಿ ಘಟನೆಗಳು ನಡೆಯುವುದಕ್ಕೆ ಕಾರಣವಾದ ಕಳಪೆ ಗುಣಮಟ್ಟದ ಕಾಮಗಾರಿ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ್, ಪೀರ ಸಾಬ,ಅಮೋಗ,ವೀರೇಶ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.