ಯಾದಗಿರಿ: ಹಗರಣ ಮಾಡಿ ಕರ್ತವ್ಯ ಲೋಪ ಮಾಡಿದ ಸಹಾಯಕ ತೋಟಗಾರಿಕೆ ನಿರ್ದೆಶಕ ಹುದ್ದೆಯಲ್ಲಿರುವ ಅಜೀಮೊದ್ದೀನ್‌ನನ್ನು ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಉಪ ನಿರ್ದೇಶಕರ ಹುದ್ದೆಗೆ ಪ್ರಭಾರ ವಹಿಸಿಕೊಟ್ಟುದಲ್ಲದೇ ಫೀಲ್ಡ್ ಆಫೀಸರ್ ಸುಂದರೇಶ ಇವರ ವಿರುದ್ಧ ದೂರು ಸಲ್ಲಿಸಿದ ಮೇಲೆ ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೇ ಬದಲಾಗಿ ಹೆಚ್ಚಿನ ಹುದ್ದೆಯ ಪ್ರಭಾರ ನೀಡಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ತೋಟಗಾರಿಕೆ ಇಲಾಖೆ ಕಾರ್ಯವೈಖರಿ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟಿಸಲಾಯಿತು.
ಅಧ್ಯಕ್ಷರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಘಟಕ ಅಧ್ಯಕ್ಷ ಶರಣು ಎಸ್. ನಾಟೇಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಹಾಯಕ ತೋಟಗಾರಿಕೆ ನಿರ್ದೇಶಕ ಅಜಿಮೋದ್ದಿನ್ ರ ಕರ್ತವ್ಯ ಲೋಪ ಹಾಗೂ ಬ್ರಷ್ಟಾಚಾರ, ಸ್ವಜನ ಪಕ್ಷಪಾತಗಳ ಕುರಿತು ನಮ್ಮ ಸಂಘಟನೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ೨ ತಿಂಗಳ ಹಿಂದೆಯೇ ಆಗ್ರಹಿಸಲಾಗಿತ್ತು.
ಇಲಾಖೆಯಲ್ಲಿ ನಿರಂತರ ಬ್ರಷ್ಟಾಚಾರ ಮಾಡುತ್ತಾ ಕಳೆದ ಮೂರು ವರ್ಷಗಳಿಂದ ಒಬ್ಬೇ ಒಬ್ಬ ರೈತರಿಗೆ ಮಾಹಿತಿ ನೀಡಿ ಸರ್ಕಾರದ ಸೌಲತ್ತು ಒದಗಿಸುವ ಕೆಲಸ ಮಾಡದೇ ಬರಿ ದಲ್ಲಾಳಿಗಳನ್ನು ಇಟ್ಟುಕೊಂಡು ಅವರ ಮುಖಾಂತರ ಬಂದವರ ಬಳಿ ಹಣ ಪಡೆದುಕೊಂಡು ಭಾರಿ ಬ್ರಷ್ಟಾಚಾರ ನಿರತರಾಗಿದ್ದುದನ್ನು ನಮ್ಮ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಸಾಕ್ಷಿ ಸಮೇತ ದೂರು ಸಲ್ಲಿಸಿದರೂ ಯಾವುದೇ ಕ್ರಮ ಇದುವರೆಗೆ ಜರುಗಿಸಿಲ್ಲ.
ಇದಲ್ಲದೇ ಈ ಇಬ್ಬರು ಅಧಿಕಾರಿಗಳು ಯಾವುದೇ ಸರ್ಕಾರಿ ಕಾರ್ಯಕ್ರಮಗಳ ದಲ್ಲಾಳಿಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದಾಗಿ ದಾಖಲೆಗಳನ್ನು ಸೃಷ್ಟಿಸಿ ಹಣ ತಿಂದು ಹಾಕುತ್ತಿದ್ದಾರೆ. ಯಾವುದೇ ರೈತರ ಕರೆ ಸ್ವೀಕರಿಸುವುದಿಲ್ಲ. ಮಾಹಿತಿ ನೀಡುವುದಿಲ್ಲ. ಅಸಲಿಗೆ ಕಚೇರಿಯಲ್ಲಿ ಸಿಗುವುದೇ ಇಲ್ಲ ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದರೂ ಕ್ರಮವಿಲ್ಲ.
ಆದರೆ ದುರಂತವೆAದರೆ ನಾವು ದೂರು ನೀಡಿ ಎರಡು ತಿಂಗಳಾದ ನಂತರ ಆರೋಪಿ ಅಧಿಕಾರಿಗೆ ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಹುದ್ದೆಯಾಗ ಉಪ ನಿರ್ದೇಶಕರ ಹುದ್ದೆಗೆ ಪ್ರಭಾರ ವಹಿಸಿಕೊಟ್ಟು ಇನ್ನಷ್ಟು ಆಕ್ರಮ ಅನ್ಯಾಯ ಮಾಡಲು ಅವಕಾಶ ಮಾಡಿಕೊಡಲಾಗಿದೆ ಇದು ಅಕ್ಷಮ್ಯವಾಗಿದೆ.
ಇದಲ್ಲದೇ ಇಲಾಖೆಯ ಫೀಲ್ಡ್ ಆಫೀಸರ್ ಆಗಿರುವ ಸುಂದರೇಶ ಇವರು ಸುಮಾರು ವರ್ಷಗಳಿಂದ ಯಾದಗಿರಿ ಕಚೇರಿಯಲ್ಲಿಯೇ ಬೀಡುಬಿಟ್ಟಿದ್ದು, ನಿರಂತರ ಅವ್ಯವಹಾರದಲ್ಲಿ ತೊಡಗಿ ಇಲಾಖೆಯ ಯಾವೊಂದು ಮಾಹಿತಿಯನ್ನು ರೈತರಿಗೆ ನೀಡದೇ ಅಕ್ರಮದಲ್ಲಿ ತಲ್ಲೀನರಾಗಿದ್ದಾರೆ.
ಇವರ ವಿರುದ್ಧ ದೂರು ಸಲ್ಲಿಸಿದ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳು ಅಂತಹ ಬ್ರಷ್ಟರಿಗೆ ಜಿಲ್ಲಾ ಮಟ್ಟದ ಹುದ್ದೆಯ ಪ್ರಭಾರ ವಹಿಸಿಕೊಟ್ಟಿರುವುದು ನೋಡಿದರೆ ಜಿಲ್ಲೆಯಲ್ಲಿ ಎಲ್ಲವೂ ಉಲ್ಟಾ ಮೀಡಿಯಂ ರೀತಿಯಲ್ಲಿ ಆಡಳಿತ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದು ವಿವರಿಸಿ ತಕ್ಷಣ ಸಂಬAಧಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ದಸಂಸ ಮುಖಂಡರಾದ ಭೀಮರಾಯ ಸಿಂಧಿಗೆರಿ, ಶಿವಶರಣಪ್ಪ ವಾಡಿ, ಮಾದೇವಪ್ಪ ಗುರುಸುಣಿಗಿ, ಭೀಮರಾಯ ಕಾಗಿ, ಖಂಡಪ್ಪ ಸಾಹುಕಾರ, ಬಾಬು ತಲಾರಿ ಗುರುಮಠಕಲ್, ದಿಲಿಪಕುಮಾರ ಕಲ್ಬುರ್ಗಿ, ಶರಣು ಮಮ್ಮದರ್, ಗಿರೀಶ ಚಟ್ಟೇರಕರ್, ವಾಸಿಮ್ ಸಗ್ರಿ, ಕ್ರಿಷ್ಣ, ನರಸಪ್ಪ, ಸಾಬರಡ್ಡಿ, ಅಜಿಮ್, ಸಂಪತ್ ಕುಮಾರ, ಬಸವರಾಜ ಹೊನಿಗೇರಾ, ಮಲ್ಲಪ್ಪ ಹೊನಗೇರಿ, ಶಂಕರ ಈಟೆ, ಮಲ್ಲಪ್ಪ, ಲಂಡನಕರ್, ಗಿರಿಮಲ್ಲಪ್ಪ, ರಾಮಲಿಂಗಪ್ಪ ಮೋಟ್ನಳ್ಳಿ ಇನ್ನಿತರ ಮಹಿಳೆಯರು ಭಾಗಿಯಾದರು.