ಕಲಬುರಗಿ,ಜು.30:ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸೋಮವಾರ ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ನಡೆಸಿದ ತಾಲೂಕಾ ಮಟ್ಟದ ಜನಸ್ಪಂದನ ಸಭೆಯು ಹಲವು ಸರ್ಕಾರಿ ಯೋಜನೆಗಳ ವಿತರಣೆಗೆ ಸಾಕ್ಷಿಯಾಯಿತು.
ಸಾಮಾಜಿಕ ಪಿಂಚಣಿ ಮಂಜೂರಾತಿ ಆದೇಶ, ಎ.ಬಿ.ಆರ್.ಕೆ ಕಾರ್ಡ್ ವಿತರಣೆ, ಕನ್ನಡಕ ವಿತರಣೆ, ಗಂಗಾ ಖ್ಯಡಣ ಯೋಜನೆಯಡಿ ಜೆಸ್ಕಾಂ ನಿಂದ ೧೫ ಜನ ಫಲಾನುಭವಿಗಳಿಗೆ ಕಾರ್ಯದೇಶ, ಕೃಷಿ ಇಲಾಖೆಯಿಂದ ರೈತರಿಗೆ ಪಂಪ್ ಸೆಟ್ ವಿತರಣೆ, ಸಾಯಿಲ್ ಕಾರ್ಡ್ ವಿತರಣೆ, ಸಿಡಿಪಿಓ ಕಚೇರಿಯಿಂದ ಗರ್ಭಿಣಿ-ಬಾಣಂತಿಯರಿಗೆ ಪೂರಕ ಪೌಷ್ಠಿಕ ಕಿಟ್ ವಿತರಣೆಗೆ ಜನ ಸಾಕ್ಷಿಯಾದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದಲ್ಲದೆ ಸ್ಥಳದಲ್ಲಿಯೇ ಸುಮಾರು ೧೫ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆದೇಶ ಪತ್ರ ವಿತರಣೆ ಮಾಡಿದರು. ಇಂದು ಸುಮಾರು ೧೧೦ ಅರ್ಜಿ ಸಲ್ಲಿಕೆಯಾದವು.
ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ತಹಶೀಲ್ದಾರ ಸಂಜೀವಕುಮಾರ ದಾಸರ್, ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಸೊನ್ನ ಬ್ಯಾರೇಜಿಗೆ ಡಿ.ಸಿ. ಭೇಟಿ: ಜನಸ್ಪಂದನ ಸಭೆ ನಂತರ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ತಾಲೂಕಿನ ಸೊನ್ನ ಬ್ಯಾರೇಜಿಗೆ ಭೇಟಿ ನೀಡಿ ಬ್ಯಾರೇಜಿನಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಮತ್ತು ಒಳ-ಹೊರ ಹರಿವಿನ ಬಗ್ಗೆ ಕೆ.ಎನ್.ಎನ್.ಎಲ್ ಇಂಜಿನೀಯರ್ ಗಳಿಂದ ಮಾಹಿತಿ ಪಡೆದ ಅವರು, ಒಳ ಹರಿವು ಹೆಚ್ಚಾದಲ್ಲಿ ಕೂಡಲೆ ಬ್ಯಾರೇಜಿನ ಕೆಳ ಹಂತದ ಪ್ರದೇಶಗಳ ಗ್ರಾಮಗಳಿಗೆ ಸೂಕ್ತ ಮುನ್ನೆಚ್ಚರಿಕೆ ಸಂದೇಶ ರವಾನಿಸಬೇಕು ಎಂದರು.
ಇದಲ್ಲದೆ ಮಾರ್ಗ ಮದ್ಯದಲ್ಲಿ ಗೊಬ್ಬೂರ ಗ್ರಾಮದಲ್ಲಿ ಇತ್ತೀಚೆಗೆ ಮಳೆಯಿಂದ ಮನೆ ಬಿದ್ದ ಸಂಗಮ್ಮ ಸಿಂಗೆ ಅವರ ಮನೆಗೆ ಡಿ.ಸಿ. ಅವರು ಭೇಟಿ ನೀಡಿ ವೀಕ್ಷಿಸಿದರು.